Skip to content
Opens in a new window
Listen to this chapter • 1:51

[1] ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋಷಪಡಲಿ.

[2] ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ; ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ.

[3] ಬೆಂಕಿಯು ಅವರ ಮುಂದೆ ಹೋಗಿ ಅವರ ವೈರಿಗಳನ್ನು ಸುತ್ತಲೂ ದಹಿಸುವುದು.

[4] ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ಕಂಡು ನಡುಗುತ್ತದೆ.

[5] ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ, ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ.

[6] ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ; ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ.

[7] ವಿಗ್ರಹಗಳನ್ನು ಪೂಜಿಸಿ, ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!

[8] ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ.

[9] ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ; ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.

[10] ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು; ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು.

[11] ನೀತಿವಂತನಿಗೋಸ್ಕರ ಬೆಳಕೂ, ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು.

[12] ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ; ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.

ಕೀರ್ತನೆಗಳು — Chapters