Skip to content
Opens in a new window
Listen to this chapter • 2:02

[1] ರಾಷ್ಟ್ರಗಳು ಒಳಸಂಚು ಮಾಡುವುದೂ ಜನಾಂಗಗಳು ವ್ಯರ್ಥವಾಗಿ ಕುತಂತ್ರ ಮಾಡುವುದೂ ಏಕೆ?

[2] ಯೆಹೋವ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ, ಭೂಲೋಕದ ಅರಸರು ನಿಂತುಕೊಳ್ಳುತ್ತಾರೆ. ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.

[3] “ಅವರು ಹಾಕಿದ ಬೇಡಿಗಳನ್ನು ಮುರಿದು ಬಂಧಗಳನ್ನು ಹರಿದು ಬೀಸಾಡೋಣ,” ಎನ್ನುತ್ತಾರೆ.

[4] ಪರಲೋಕದಲ್ಲಿ ಕೂತಿರುವ ದೇವರು ಅದಕ್ಕೆ ನಗುವರು, ಕರ್ತದೇವರು ಅವರನ್ನು ಕಂಡು ಅಪಹಾಸ್ಯ ಮಾಡುವರು.

[5] ಕರ್ತದೇವರು ತಮ್ಮ ಕೋಪದಿಂದ ಅವರನ್ನು ಗದರಿಸುತ್ತಾ, ತಮ್ಮ ಬೇಸರದಿಂದ ಅವರನ್ನು ಕಳವಳಪಡಿಸಿ ಹೀಗೆ ಹೇಳುವರು,

[6] “ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.”

[7] ನಾನು ಯೆಹೋವ ದೇವರ ತೀರ್ಪನ್ನು ಹೀಗೆ ಪ್ರಕಟಿಸುವೆನು: ಅವರು ನನಗೆ ಹೇಳಿದ್ದು, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ.

[8] ನನ್ನನ್ನು ಕೇಳು, ಆಗ ನಾನು ರಾಷ್ಟ್ರಗಳನ್ನು ನಿನ್ನ ವಾರಸಾಗಿಯೂ, ಭೂಮಿಯ ಕಟ್ಟಕಡೆಯವರೆಗೂ ಇರುವ ದೇಶಗಳನ್ನೂ ನಿಮ್ಮ ಸೊತ್ತಾಗಿಯೂ ಕೊಡುವೆನು.

[9] ಕಬ್ಬಿಣದ ಗದೆಯಿಂದ ನೀನು ಅವರನ್ನು ದಂಡಿಸಿ, ಮಣ್ಣಿನ ಮಡಕೆಯಂತೆ ಚೂರುಚೂರಾಗಿ ಅವರನ್ನು ಒಡೆದುಹಾಕುವೆ.”

[10] ಆದ್ದರಿಂದ, ರಾಜರುಗಳೇ, ಈಗ ಜ್ಞಾನವಂತರಾಗಿರಿ. ಭೂಲೋಕದ ಅಧಿಕಾರಿಗಳೇ, ಎಚ್ಚರಿಕೆಯಿಂದಿರಿ.

[11] ಭಯಭಕ್ತಿಯಿಂದ ಯೆಹೋವ ದೇವರ ಸೇವೆಮಾಡಿರಿ, ನಡುಗುತ್ತಾ ಅವರ ಆಳ್ವಿಕೆಯಲ್ಲಿ ಉಲ್ಲಾಸಪಡಿರಿ.

[12] ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು.

ಕೀರ್ತನೆಗಳು — Chapters