[1] ಯೆಹೋವ ದೇವರೇ, ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.
[2] ನನ್ನ ದೇವರೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; ನಾನು ನಾಚಿಕೆಪಡದಂತೆ ಮಾಡಿರಿ; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
[3] ನಿಮ್ಮನ್ನು ನಿರೀಕ್ಷಿಸುವವರಲ್ಲಿ ಯಾರೂ ನಾಚಿಕೆಪಡದಿರಲಿ; ನಿಷ್ಕಾರಣವಾಗಿ ವಂಚನೆ ಮಾಡುವವರು ನಾಚಿಕೆಪಡಲಿ.
[4] ಯೆಹೋವ ದೇವರೇ, ನಿಮ್ಮ ಮಾರ್ಗಗಳನ್ನು ನನಗೆ ತೋರಿಸಿರಿ; ನಿಮ್ಮ ದಾರಿಗಳನ್ನು ನನಗೆ ಕಲಿಸಿರಿ.
[5] ನಿಮ್ಮ ಸತ್ಯದಲ್ಲಿ ಮಾರ್ಗದರ್ಶನ ನೀಡಿ ನನಗೆ ಬೋಧಿಸಿರಿ; ಏಕೆಂದರೆ ನೀವು ನನ್ನ ರಕ್ಷಕ ಆಗಿರುವ ದೇವರಾಗಿದ್ದೀರಿ; ನಿಮ್ಮನ್ನು ನಾನು ದಿನವೆಲ್ಲಾ ನಿರೀಕ್ಷಿಸುತ್ತಿದ್ದೇನೆ.
[6] ಯೆಹೋವ ದೇವರೇ, ಆದಿಯಿಂದಿರುವ ನಿಮ್ಮ ಅನುಕಂಪವನ್ನೂ ನಿಮ್ಮ ಪ್ರೀತಿಯನ್ನೂ, ಕರುಣೆಯನ್ನೂ ಜ್ಞಾಪಕಮಾಡಿಕೊಳ್ಳಿರಿ.
[7] ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ.
[8] ಯೆಹೋವ ದೇವರು ಒಳ್ಳೆಯವರೂ ನ್ಯಾಯವುಳ್ಳವರೂ ಆಗಿದ್ದಾರೆ; ಆದ್ದರಿಂದ ಅವರು ಪಾಪಿಗಳಿಗೆ ತಮ್ಮ ಮಾರ್ಗಗಳನ್ನು ಬೋಧಿಸುತ್ತಾರೆ.
[9] ದೀನರನ್ನು ನ್ಯಾಯ ಮಾರ್ಗದಲ್ಲಿ ನಡೆಸಿ, ದೀನರಿಗೆ ತಮ್ಮ ಮಾರ್ಗವನ್ನು ಬೋಧಿಸುತ್ತಾರೆ.
[10] ಯೆಹೋವ ದೇವರ ಒಡಂಬಡಿಕೆಯನ್ನು ಕೈಗೊಳ್ಳುವವರಿಗೆ ಅವರ ದಾರಿಯೆಲ್ಲವು ಪ್ರೀತಿ, ಸತ್ಯದಿಂದ ತುಂಬಿರುತ್ತವೆ.
[11] ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ ನನ್ನನ್ನು ಮನ್ನಿಸಿರಿ.
[12] ಯಾವನು ಯೆಹೋವ ದೇವರಿಗೆ ಭಯಪಡುವನೋ, ಅಂಥವನಿಗೆ ಅವರು ಆಯ್ದುಕೊಳ್ಳತಕ್ಕ ಮಾರ್ಗವನ್ನು ಬೋಧಿಸುವರು.
[13] ಅಂಥವರು ಜೀವಮಾನವೆಲ್ಲಾ ಸಫಲರಾಗಿರುವರು. ಅಂಥವರ ಸಂತಾನವು ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದು.
[14] ಯೆಹೋವ ದೇವರ ರಹಸ್ಯವು ಅವರಿಗೆ ಭಯಪಡುವವರೊಂದಿಗೆ ಇರುವುದು; ತಮ್ಮ ಒಡಂಬಡಿಕೆಯನ್ನು ಅವರು ಅಂಥವರಿಗೇ ತಿಳಿಸುವರು.
[15] ನನ್ನ ಕಣ್ಣುಗಳು ಯಾವಾಗಲೂ ಯೆಹೋವ ದೇವರ ಕಡೆಗೆ ಇರುತ್ತವೆ; ಏಕೆಂದರೆ ಅವರೇ ನನ್ನ ಪಾದಗಳನ್ನು ಬಲೆಯಿಂದ ಬಿಡಿಸುವವರು.
[16] ನೀವು ನನ್ನ ಕಡೆಗೆ ತಿರುಗಿ ನನ್ನನ್ನು ಕರುಣಿಸಿರಿ; ನಾನು ಒಬ್ಬಂಟಿಗನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
[17] ನನ್ನ ಹೃದಯದ ಕಷ್ಟಗಳನ್ನು ಪರಿಹರಿಸಿರಿ; ನೀವು ನನ್ನ ಸಂಕಟಗಳಿಂದ ನನ್ನನ್ನು ಬಿಡಿಸಿರಿ.
[18] ನನ್ನ ಬಾಧೆಯನ್ನೂ ವ್ಯಥೆಯನ್ನೂ ನೋಡಿರಿ; ನನ್ನ ಪಾಪಗಳನ್ನೆಲ್ಲಾ ತೆಗೆದುಹಾಕಿರಿ.
[19] ನನ್ನ ಶತ್ರುಗಳನ್ನು ನೋಡಿರಿ, ಅವರು ಹೆಚ್ಚಾಗಿದ್ದಾರೆ; ತೀವ್ರ ಹಗೆಯಿಂದ ಅವರು ನನ್ನನ್ನು ದ್ವೇಷಿಸುತ್ತಾರೆ.
[20] ನನ್ನ ಪ್ರಾಣವನ್ನು ಕಾಪಾಡಿ, ನನ್ನನ್ನು ಬಿಡಿಸಿರಿ; ನಾನು ನಾಚಿಕೆಪಡದಂತೆ ಮಾಡಿರಿ, ಏಕೆಂದರೆ ನಾನು ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
[21] ಯಥಾರ್ಥತೆಯೂ ನಿಷ್ಕಪಟವೂ ನನ್ನನ್ನು ಕಾಯಲಿ, ಏಕೆಂದರೆ ನನ್ನ ನಿರೀಕ್ಷೆಯು ನಿಮ್ಮ ಮೇಲೆ ಇದೆ.
[22] ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ವಿಮೋಚಿಸಿರಿ.