Skip to content
Opens in a new window
Listen to this chapter • 1:37

[1] ನನ್ನ ನೀತಿಯಾಗಿರುವ ದೇವರೇ, ನಾನು ಕರೆಯುವಾಗ ನನಗೆ ಸದುತ್ತರವನ್ನು ಕೊಡಿರಿ. ನನ್ನ ಸಂಕಟದಿಂದ ನನಗೆ ನೆಮ್ಮದಿಯನ್ನು ನೀಡಿರಿ; ನನ್ನನ್ನು ಕರುಣಿಸಿ, ನನ್ನ ಪ್ರಾರ್ಥನೆಯನ್ನು ಕೇಳಿರಿ.

[2] ಓ ಮಾನವ, ನೀನು ಎಲ್ಲಿಯತನಕ ನನ್ನ ಮಹಿಮೆಯನ್ನು ಅವಮಾನಕ್ಕೆ ಗುರಿಪಡಿಸುವಿ? ನೀನು ಎಲ್ಲಿಯತನಕ ವ್ಯರ್ಥವಾದದ್ದನ್ನು ಪ್ರೀತಿಸಿ, ಸುಳ್ಳನ್ನು ಹುಡುಕುವಿ?

[3] ಯೆಹೋವ ದೇವರು ತಮ್ಮ ನಂಬಿಗಸ್ತರನ್ನು ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ; ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.

[4] ನಡುಗಿರಿ, ಪಾಪಮಾಡಬೇಡಿರಿ; ನೀವು ನಿಮ್ಮ ಹಾಸಿಗೆಯ ಮೇಲೆ ಇರುವಾಗ, ನಿಮ್ಮ ಹೃದಯಗಳಲ್ಲಿ ಧ್ಯಾನಮಾಡಿ ಮೌನವಾಗಿರಿ.

[5] ನೀತಿಯ ಬಲಿಗಳನ್ನು ಅರ್ಪಿಸಿರಿ ಯೆಹೋವ ದೇವರಲ್ಲಿ ನಿಮ್ಮ ಭರವಸೆಯನ್ನು ಇಡಿರಿ.

[6] ಯೆಹೋವ ದೇವರೇ, “ನಮಗೆ ಒಳ್ಳೆಯದನ್ನು ಮಾಡುವವರು ಯಾರು?” ಎಂದು ಕೇಳುವವರು ಅನೇಕರಿದ್ದಾರೆ. ನಿಮ್ಮ ಮುಖಪ್ರಕಾಶವು ನಮ್ಮ ಮೇಲೆ ಬೆಳಗಲಿ.

[7] ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.

[8] ಸಮಾಧಾನವಾಗಿ ಮಲಗಿ ನಿದ್ರೆ ಮಾಡುವೆನು, ಏಕೆಂದರೆ ಯೆಹೋವ ದೇವರೇ, ನೀವೊಬ್ಬರೇ ನನ್ನನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡುತ್ತೀರಿ.

ಕೀರ್ತನೆಗಳು — Chapters