[1] ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ. ಮುಯ್ಯಿ ತೀರಿಸುವವರು ನೀವೇ; ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.
[2] ಭೂಲೋಕದ ನ್ಯಾಯಾಧಿಪತಿಯೇ, ಗರ್ವಿಷ್ಠರಿಗೆ ತಕ್ಕ ಪ್ರತೀಕಾರವನ್ನು ಸಲ್ಲಿಸ ಬನ್ನಿರಿ.
[3] ಯೆಹೋವ ದೇವರೇ, ಎಲ್ಲಿಯವರೆಗೆ? ದುಷ್ಟರು ಎಷ್ಟರವರೆಗೆ ಹಿಗ್ಗುತ್ತಿರಬೇಕು?
[4] ಕೆಡುಕರು ಉಬ್ಬಿಕೊಂಡು ಮಾತನಾಡುತ್ತಾರೆ. ಕೇಡು ಮಾಡುವವರೆಲ್ಲರೂ ಕೊಚ್ಚಿಕೊಳ್ಳುತ್ತಾರೆ.
[5] ಯೆಹೋವ ದೇವರೇ, ನಿಮ್ಮ ಜನರನ್ನು ಅವರು ಕುಗ್ಗಿಸುತ್ತಾರೆ. ನಿಮ್ಮ ಬಾಧ್ಯತೆಯನ್ನು ಬಾಧಿಸುತ್ತಾರೆ.
[6] ವಿಧವೆಯನ್ನೂ ಪರದೇಶಸ್ಥನನ್ನೂ ಅವರು ಹತ್ಯಮಾಡುತ್ತಾರೆ. ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
[7] “ಯೆಹೋವ ದೇವರು ನೋಡುವುದಿಲ್ಲ, ಯಾಕೋಬನ ದೇವರು ಗ್ರಹಿಸುವುದಿಲ್ಲ,” ಎಂದು ಅವರು ಹೇಳುತ್ತಾರೆ.
[8] ಜನರಲ್ಲಿ ಬುದ್ಧಿಹೀನರೇ, ನೀವು ಗ್ರಹಿಸಿರಿ. ಮೂರ್ಖರೇ, ಯಾವಾಗ ಬುದ್ಧಿವಂತರಾಗುವಿರಿ?
[9] ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ? ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?
[10] ರಾಷ್ಟ್ರಗಳಿಗೆ ಶಿಕ್ಷಣ ಕೊಡುವ ದೇವರು ಶಿಕ್ಷಿಸುವುದಿಲ್ಲವೋ? ಮಾನವನಿಗೆ ಕಲಿಸುವ ದೇವರಲ್ಲಿ ಜ್ಞಾನದ ಕೊರತೆಯಿದೆಯೋ?
[11] ಮನುಷ್ಯನ ಯೋಚನೆಗಳು ವ್ಯರ್ಥವಾದವುಗಳೆಂದು ಯೆಹೋವ ದೇವರು ತಿಳಿದುಕೊಳ್ಳುತ್ತಾರೆ.
[12] ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು. ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.
[13] ದುಷ್ಟನಿಗಾಗಿ ಕುಣಿಯು ಅಗಿಯುವವರೆಗೆ ಅಂಥವನಿಗೆ ವಿಶ್ರಾಂತಿಯನ್ನು ಕೊಡುವಿರಿ.
[14] ಯೆಹೋವ ದೇವರು ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ. ದೇವರು ತಮ್ಮ ಬಾಧ್ಯತೆಯಾಗಿರುವವರನ್ನು ಎಂದೂ ಮರೆಯುವುದಿಲ್ಲ.
[15] ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು; ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.
[16] ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು? ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?
[17] ಯೆಹೋವ ದೇವರು ನನಗೆ ಸಹಾಯ ಕೊಡದಿದ್ದರೆ, ನಾನು ಬೇಗನೇ ಮರಣದ ಮೌನದಲ್ಲಿ ವಾಸಿಸುತ್ತಿದ್ದೆನು.
[18] “ನನ್ನ ಕಾಲು ಜಾರುತ್ತಿದೆ,” ಎಂದು ನಾನು ಹೇಳುತ್ತಿರುವಾಗಲೇ, ಯೆಹೋವ ದೇವರೇ, ನಿಮ್ಮ ಪ್ರೀತಿಯು ನನ್ನನ್ನು ಎತ್ತಿ ಹಿಡಿಯಿತು.
[19] ನನ್ನ ಚಿಂತೆಗಳು ನನ್ನೊಳಗೆ ಹೆಚ್ಚುತ್ತಿರುವಾಗ, ನಿಮ್ಮ ಸಂತೈಸುವಿಕೆಯು ನನ್ನ ಮನಸ್ಸನ್ನು ಆನಂದಪಡಿಸುತ್ತದೆ.
[20] ತೀರ್ಪುಗಳಿಂದ ಕೇಡನ್ನು ಕಲ್ಪಿಸುವ ಅಪರಾಧದ ನ್ಯಾಯಾಸನವು ನಿಮ್ಮ ಸಂಗಡ ಅನ್ಯೋನ್ಯವಾಗಿರುವುದೋ?
[21] ನೀತಿವಂತನ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ಅವರ ನಿರಪರಾಧಿಗಳನ್ನು ಮರಣಕ್ಕೆ ಒಪ್ಪಿಸುತ್ತಾರೆ.
[22] ಆದರೆ ಯೆಹೋವ ದೇವರು ನನಗೆ ದುರ್ಗವೂ, ನನ್ನ ದೇವರೂ, ನನ್ನ ಆಶ್ರಯದ ಬಂಡೆಯೂ ಆಗಿದ್ದಾರೆ.
[23] ವೈರಿಯ ಅಪರಾಧವು ಅವರ ಮೇಲೆಯೇ ತಿರುಗಿ ಬೀಳಲಿ; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಯೆಹೋವ ದೇವರು ಅವರನ್ನು ಸಂಹರಿಸಿ ಬಿಡುವನು.