Skip to content
Opens in a new window
Listen to this chapter • 6:03

[1] ಯೆಹೋವ ದೇವರನ್ನು ಕೊಂಡಾಡಿರಿ, ಅವರು ಒಳ್ಳೆಯವರು; ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.

[2] ಯೆಹೋವ ದೇವರು ವಿಮೋಚಿಸಿದವರು ಹಾಗೆ ಹೇಳಲಿ; ವೈರಿಯ ಕೈಯಿಂದ ಬಿಡುಗಡೆಯಾದವರು ಆ ಕಥೆಯನ್ನು ಹೇಳಲಿ

[3] ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಸಹ ಹಾಗೆ ಹೇಳಲಿ.

[4] ಮರುಭೂಮಿಯಲ್ಲಿಯೂ, ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು, ವಾಸಿಸುವುದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ ಹೋದರು.

[5] ಹಸಿದು, ದಾಹಗೊಂಡು ಅವರ ಪ್ರಾಣವು ಕುಗ್ಗಿಹೋಯಿತು.

[6] ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿದರು.

[7] ಜನರು ವಾಸಿಸುವ ಪಟ್ಟಣಕ್ಕೆ ಹೋಗುವಹಾಗೆ, ಜನರನ್ನು ಸರಿಯಾದ ಹಾದಿಯಲ್ಲಿ ನಡೆಸಿದರು.

[8] ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರ ಉಪಕಾರಮಾಡಲಿ, ಮಾನವರಿಗೆ ದೇವರು ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.

[9] ದೇವರು ದಾಹಪಟ್ಟ ಪ್ರಾಣವನ್ನು ತೃಪ್ತಿಪಡಿಸಿ, ಹಸಿದ ಪ್ರಾಣವನ್ನು ಒಳ್ಳೆಯದರಿಂದ ತುಂಬಿಸಿದ್ದಾರೆ.

[10] ಕೆಲವರು ಕತ್ತಲಲ್ಲಿ ಮತ್ತು ಮರಣದ ನೆರಳಿನಲ್ಲಿ ಕುಳಿತರು, ಕೆಲವರು ಸಂಕಟದಲ್ಲಿಯೂ, ಕಬ್ಬಿಣದ ಬೇಡಿಗಳಲ್ಲಿ ಬಂಧಿತರಾಗಿ ಸೆರೆಬಿದ್ದವರು ಕೆಲವರು.

[11] ಅವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತರ ಯೋಜನೆಯ ಬಗ್ಗೆ ಹೀನೈಯಿಸಿದ್ದರಿಂದ ಅವರಿಗೆ ಹಾಗಾಯಿತು.

[12] ದೇವರು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕನಿಲ್ಲದೆ ಕೆಳಗೆ ಬಿದ್ದರು.

[13] ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.

[14] ಕತ್ತಲೆಯೊಳಗಿಂದಲೂ, ಮರಣದ ನೆರಳಿನಿಂದಲೂ ದೇವರು ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟರು.

[15] ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ದೇವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.

[16] ದೇವರು ಕಂಚಿನ ಕದಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದುಬಿಟ್ಟಿದ್ದಾರೆ.

[17] ಮೂಢರು ತಮ್ಮ ದ್ರೋಹದಿಂದಲೂ ಕೆಲವರು ತಮ್ಮ ಅಕ್ರಮಗಳಿಂದಲೂ ಶ್ರಮೆ ಪಡುತ್ತಾರೆ.

[18] ಅವರ ಪ್ರಾಣವು ಎಲ್ಲಾ ಆಹಾರಕ್ಕೂ ಅಸಹ್ಯಪಡುವಷ್ಟು ಅಸ್ವಸ್ಥರಾಗುತ್ತಾರೆ. ಅವರು ಮರಣದ ಬಾಗಿಲುಗಳಿಗೆ ಸಮೀಪಿಸುತ್ತಾರೆ.

[19] ಆಗ ಅವರು ಸಹ ಇಕ್ಕಟ್ಟಿನಲ್ಲಿ ಅವರು ಯೆಹೋವ ದೇವರಿಗೆ ಕೂಗಿದರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.

[20] ದೇವರು ತಮ್ಮ ವಾಕ್ಯವನ್ನು ಕಳುಹಿಸಿ, ಅವರನ್ನು ಸ್ವಸ್ಥಮಾಡಿದರು; ನಾಶನದಿಂದಲೂ ಅವರನ್ನು ತಪ್ಪಿಸಿದರು.

[21] ಅವರು ಯೆಹೋವ ದೇವರನ್ನು ಒಡಂಬಡಿಕೆಯ ಕುಂದದ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.

[22] ಧನ್ಯವಾದ ಬಲಿಗಳನ್ನು ಅರ್ಪಿಸಿ, ದೇವರ ಕೆಲಸಗಳನ್ನು ಉತ್ಸಾಹದಿಂದ ಸಾರಲಿ.

[23] ಕೆಲವರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುತ್ತಾರೆ. ಅವರು ಜಲರಾಶಿಯಲ್ಲಿ ವ್ಯಾಪಾರ ಮಾಡುವವರು,

[24] ಯೆಹೋವ ದೇವರ ಕೆಲಸಗಳನ್ನೂ, ಅಗಾಧ ಜಲದಲ್ಲಿ ದೇವರ ಅದ್ಭುತಗಳನ್ನೂ ಕಾಣುತ್ತಾರೆ.

[25] ದೇವರು ಆಜ್ಞಾಪಿಸಿ ಬಿರುಗಾಳಿಯನ್ನು ಎಬ್ಬಿಸಿದರು; ಅದು ಅದರ ತೆರೆಗಳನ್ನು ಎಬ್ಬಿಸಿತು.

[26] ಅವರು ಆಕಾಶದವರೆಗೆ ಏರುತ್ತಾರೆ, ತಿರುಗಿ ಅಗಾಧಗಳವರೆಗೆ ಇಳಿಯುತ್ತಾರೆ; ಅಪಾಯದಲ್ಲಿ ಅವರ ಪ್ರಾಣವು ಕಳವಳದಿಂದ ಕರಗಿ ಹೋಗುತ್ತದೆ.

[27] ಅವರು ಅತ್ತಿತ್ತ ತೂಗಾಡಿ ಕುಡುಕರಂತೆ ಓಲಾಡುತ್ತಿದ್ದರು. ಅವರ ಜ್ಞಾನವೆಲ್ಲಾ ಮುಗಿದು ಹೋಯಿತು.

[28] ಆಗ ಅವರು ಸಹ ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟರು; ದೇವರು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿದನು.

[29] ದೇವರು ಬಿರುಗಾಳಿಯನ್ನು ಶಾಂತ ಮಾಡಿದರು. ಅದರ ತೆರೆಗಳು ನಿಂತುಹೋದವು.

[30] ಅವು ಶಾಂತವಾದಾಗ ಜನರು ಸಂತೋಷಪಟ್ಟರು. ಹೀಗೆ ಅವರು ಅಪೇಕ್ಷಿಸಿದ ಬಂದರಿಗೆ ದೇವರು ಅವರನ್ನು ನಡೆಸಿದರು.

[31] ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ, ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.

[32] ಜನರ ಸಭೆಯಲ್ಲಿ ದೇವರನ್ನು ಕೊಂಡಾಡಲಿ, ಹಿರಿಯರ ಸಭೆಯಲ್ಲಿ ದೇವರನ್ನು ಸ್ತುತಿಸಲಿ.

[33] ದೇವರು ನದಿಗಳನ್ನು ಮರುಭೂಮಿಯಾಗಿ ಮಾರ್ಪಡಿಸಿದರು, ನೀರಿನ ಬುಗ್ಗೆಗಳನ್ನು ದಾಹಗೊಂಡ ಭೂಮಿಯಂತೆ ಮಾಡಿದರು.

[34] ದೇವರು ಫಲವುಳ್ಳ ಭೂಮಿಯನ್ನು ಬಂಜರಾಗುವಂತೆ ಮಾಡಿದರು. ಇದಕ್ಕೆಲ್ಲ ಕಾರಣ ಅದರ ನಿವಾಸಿಗಳ ಕೆಟ್ಟತನವೇ ಆಗಿತ್ತು.

[35] ದೇವರು ಮರುಭೂಮಿಯನ್ನು ನೀರಿನ ಕೆರೆಯಾಗಿಯೂ, ಒಣ ಭೂಮಿಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸಿದರು.

[36] ಆದರೆ ದೇವರು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದರು; ಆ ಜನರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿದರು.

[37] ಅವರು ಹೊಲಗಳನ್ನು ಬಿತ್ತಿ, ದ್ರಾಕ್ಷಿಯ ಬಳ್ಳಿಗಳನ್ನು ನೆಟ್ಟರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.

[38] ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು; ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.

[39] ಆದರೆ ಜನರು ಸಂಖ್ಯೆಯಲ್ಲಿ ಕಡಿಮೆಯಾಗಿ ಚಿಂತೆ ಸಂಕಟದಿಂದ ಕುಗ್ಗಿಹೋದರು.

[40] ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ, ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.

[41] ಆದರೂ ದೇವರು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ, ಅವನ ಕುಟುಂಬಗಳನ್ನು ಮಂದೆಯ ಹಾಗೆ ಮಾಡಿದರು.

[42] ನೀತಿವಂತರು ನೋಡಿ ಸಂತೋಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.

[43] ಜ್ಞಾನಿಗಳು ಇವುಗಳನ್ನು ಗಮನಿಸಲಿ, ಯೆಹೋವ ದೇವರ ಪ್ರೀತಿಕೃತ್ಯಗಳನ್ನು ಗ್ರಹಿಸಿಕೊಳ್ಳಲಿ.

ಕೀರ್ತನೆಗಳು — Chapters