Skip to content
Opens in a new window
Listen to this chapter • 1:25

[1] ನನ್ನ ಸ್ವರವೆತ್ತಿ ಯೆಹೋವ ದೇವರಿಗೆ ಮೊರೆಯಿಟ್ಟಿದ್ದೇನೆ; ಸ್ವರವೆತ್ತಿ ನನ್ನ ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದೇನೆ.

[2] ದೇವರ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ದೇವರ ಮುಂದೆ ತಿಳಿಸಿದ್ದೇನೆ.

[3] ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ, ದೇವರೇ ನೀವು ನನ್ನ ದಾರಿಯನ್ನು ಕಾಯುತ್ತೀರಿ; ನಾನು ನಡೆಯುವ ದಾರಿಯಲ್ಲಿ ವೈರಿಗಳು ಗುಪ್ತವಾಗಿ ನನಗೆ ಉರುಲನ್ನು ಒಡ್ಡಿದ್ದಾರೆ.

[4] ನೋಡಿರಿ ನನ್ನ ಬಲಗಡೆಯಲ್ಲಿ, ನನ್ನ ಪರವಾಗಿ ಯಾರೂ ಇಲ್ಲ; ಆಶ್ರಯವು ನನಗೆ ಇಲ್ಲ; ನನಗಾಗಿ ಚಿಂತಿಸುವವರು ಯಾರೂ ಇಲ್ಲ.

[5] ಯೆಹೋವ ದೇವರೇ, ನಿಮಗೆ ಹೀಗೆಂದು ಮೊರೆಯಿಡುತ್ತೇನೆ: “ನೀವು ನನ್ನ ಆಶ್ರಯವೂ, ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀರಿ.”

[6] ನನ್ನ ಕೂಗನ್ನು ಆಲೈಸಿರಿ, ಏಕೆಂದರೆ ನಾನು ಬಹಳ ಕುಂದಿಹೋಗಿದ್ದೇನೆ; ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸಿರಿ, ಏಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ.

[7] ನಿಮ್ಮ ಹೆಸರನ್ನು ಕೊಂಡಾಡುವ ಹಾಗೆ ನನ್ನ ಸೆರೆಯಿಂದ ನನ್ನನ್ನು ಬಿಡಿಸಿರಿ; ಆಗ ನೀವು ನನಗೆ ಮಾಡಿದ ಉಪಕಾರವನ್ನು ಕಂಡು ನೀತಿವಂತರು ನನ್ನ ಹತ್ತಿರ ಸೇರಿಬರುವರು.

ಕೀರ್ತನೆಗಳು — Chapters