[1] ಅರಸರಾಗಿರುವ ನನ್ನ ದೇವರೇ, ನಿಮ್ಮನ್ನು ಘನಪಡಿಸುವೆನು; ನಿಮ್ಮ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
[2] ಪ್ರತಿದಿನ ನಿಮ್ಮನ್ನು ಸ್ತುತಿಸುವೆನು; ಎಂದೆಂದಿಗೂ ಸ್ತುತಿಸುವೆನು.
[3] ಯೆಹೋವ ದೇವರು ಮಹೋನ್ನತರೂ, ಬಹುಸ್ತುತಿಪಾತ್ರರೂ ಆಗಿದ್ದಾರೆ. ಅವರ ಮಹತ್ವವು ಅಗಮ್ಯವಾದದ್ದು.
[4] ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ; ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.
[5] ನಿಮ್ಮ ಘನತೆಯ ಪ್ರಭಾವದ ಮಹಿಮೆಗಳ ವಿಷಯವಾಗಿಯೂ ನಿಮ್ಮ ಅದ್ಭುತಕಾರ್ಯಗಳ ವಿಷಯವಾಗಿಯೂ ನಾನು ಧ್ಯಾನಿಸುತ್ತಿರುವೆನು,
[6] ನಿಮ್ಮ ಅತಿಶಯ ಶಕ್ತಿಯ ವಿಷಯವಾಗಿ ಅವರು ಹೇಳುವರು; ನಿಮ್ಮ ಮಹಾಕಾರ್ಯವನ್ನು ನಾನು ಸಾರುವೆನು.
[7] ನಿಮ್ಮ ಬಹು ಒಳ್ಳೆಯತನದ ಜ್ಞಾಪಕವನ್ನು ಅವರು ನುಡಿಯುವರು; ನಿಮ್ಮ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
[8] ಯೆಹೋವ ದೇವರು ಕೃಪಾಳುವೂ, ಅನುಕಂಪವೂ, ದೀರ್ಘಶಾಂತಿಯೂ, ಪ್ರೀತಿ ಪೂರ್ಣರೂ ಆಗಿದ್ದಾರೆ.
[9] ಯೆಹೋವ ದೇವರು ಸರ್ವರಿಗೂ ಒಳ್ಳೆಯವರು. ಅವರ ಅನುಕಂಪವು ತಮ್ಮ ಎಲ್ಲಾ ಸೃಷ್ಟಿಗಳ ಮೇಲೆ ಇದೆ.
[10] ಯೆಹೋವ ದೇವರೇ, ನಿಮ್ಮ ನಂಬಿಗಸ್ತರು ನಿಮ್ಮನ್ನು ಸ್ತುತಿಸುವರು.
[11] ನಿಮ್ಮ ರಾಜ್ಯದ ಮಹಿಮೆಯನ್ನು ಹೇಳುವರು; ನಿಮ್ಮ ಪರಾಕ್ರಮವನ್ನು ನುಡಿಯುವರು.
[12] ಮಾನವರಿಗೆ ನಿಮ್ಮ ಪರಾಕ್ರಮ ಕ್ರಿಯೆಗಳನ್ನೂ, ನಿಮ್ಮ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು.
[13] ನಿಮ್ಮ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿಮ್ಮ ಅಧಿಪತ್ಯವು ಎಲ್ಲಾ ತಲತಲಾಂತರಗಳಲ್ಲಿ ಇರುವುದು. ಯೆಹೋವ ದೇವರು ತಮ್ಮ ಎಲ್ಲಾ ಪ್ರತಿಜ್ಞೆಗಳಲ್ಲಿ ನಂಬಿಗಸ್ತರಾಗಿರುತ್ತಾರೆ. ಎಲ್ಲಾ ಕಾರ್ಯಗಳಲ್ಲಿಯೂ ಅವರ ಅನುಗ್ರಹ ಉಳಿದಿದೆ.
[14] ಯೆಹೋವ ದೇವರು ಬೀಳುವವರೆಲ್ಲರನ್ನು ಉದ್ಧಾರ ಮಾಡುತ್ತಾರೆ. ತಗ್ಗಿಸಿಕೊಳ್ಳುವವರೆಲ್ಲರನ್ನು ಎತ್ತುತ್ತಾರೆ.
[15] ದೇವರೇ, ಎಲ್ಲರ ಕಣ್ಣುಗಳು ನಿಮಗಾಗಿ ಕಾಯುತ್ತಿರುತ್ತವೆ. ನೀವು ಅವರಿಗೆ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀರಿ.
[16] ನಿಮ್ಮ ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ಪೂರೈಸುತ್ತೀರಿ.
[17] ಯೆಹೋವ ದೇವರು ತಮ್ಮ ಎಲ್ಲಾ ಮಾರ್ಗಗಳಲ್ಲಿ ನೀತಿವಂತರೂ ತಮ್ಮ ಸೃಷ್ಟಿಗೆಲ್ಲಾ ಪ್ರೀತಿ ತೋರಿಸುವವರೂ ಆಗಿದ್ದಾರೆ.
[18] ಯೆಹೋವ ದೇವರನ್ನು ಕರೆಯುವವರು ಯಥಾರ್ಥವಾಗಿ ಕರೆಯುವುದಾದರೆ, ಅವರು ಅವರಿಗೆ ಸಮೀಪವಾಗಿದ್ದಾರೆ.
[19] ತಮಗೆ ಭಯಪಡುವವರ ಇಷ್ಟವನ್ನು ನೆರವೇರಿಸುತ್ತಾರೆ. ಅವರ ಮೊರೆಯನ್ನು ಕೇಳಿ, ಅವರನ್ನು ರಕ್ಷಿಸುತ್ತಾರೆ.
[20] ಯೆಹೋವ ದೇವರು, ತಮ್ಮನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾರೆ. ಆದರೆ ದುಷ್ಟರೆಲ್ಲರನ್ನು ದಂಡಿಸುತ್ತಾರೆ.
[21] ನನ್ನ ಬಾಯಿ ಯೆಹೋವ ದೇವರ ಸ್ತೋತ್ರವನ್ನು ನುಡಿಯಲಿ; ಸಮಸ್ತ ಜೀವಿಗಳು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.