Skip to content
Opens in a new window
Listen to this chapter • 1:12

[1] ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಿಗಳ ಮಾರ್ಗದಲ್ಲಿ ನಿಲ್ಲದೆ, ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,

[2] ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ, ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು.

[3] ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ, ಅದರ ಎಲೆ ಉದುರುವುದೇ ಇಲ್ಲ. ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು.

[4] ಆದರೆ ದುಷ್ಟರು ಹಾಗಲ್ಲ! ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೇ ಇದ್ದಾರೆ.

[5] ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು, ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ.

[6] ಯೆಹೋವ ದೇವರು ನೀತಿವಂತರ ಮಾರ್ಗವನ್ನು ಅರಿತಿದ್ದಾರೆ; ಆದರೆ ದುಷ್ಟರ ಮಾರ್ಗವು ನಾಶಕ್ಕೆ ನಡೆಸುವುದು.

ಕೀರ್ತನೆಗಳು — Chapters