Skip to content
Opens in a new window
Listen to this chapter • 6:09

[1] ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ; ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.

[2] ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ; ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.

[3] ದೇವರ ಪರಿಶುದ್ಧ ನಾಮವನ್ನು ಹೊಗಳಿರಿ; ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.

[4] ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.

[5] ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.

[6] ದೇವರ ಸೇವಕನಾದ ಅಬ್ರಹಾಮನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,

[7] ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.

[8] ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,

[9] ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾರೆ.

[10] ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು; ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:

[11] “ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”

[12] ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.

[13] ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.

[14] ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ ಹೀಗೆ ಹೇಳಿದರು:

[15] “ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.”

[16] ದೇವರು ಕ್ಷಾಮವನ್ನು ದೇಶದಲ್ಲಿ ಅನುಮತಿಸಿದರು. ಆಹಾರದ ಒದಗುವಿಕೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದರು.

[17] ಆಗ ದೇವರು ಅವರ ಮುಂದೆ ಒಬ್ಬ ಮನುಷ್ಯನನ್ನು ಕಳುಹಿಸಿದರು. ಅವನೇ ದಾಸನಾಗಿ ಮಾರಲಾದ ಯೋಸೇಫನು.

[18] ಸಂಕೋಲೆಗಳಿಂದ ಅವನ ಕಾಲನ್ನು ನೋಯಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಇರಿಸಿದರು.

[19] ಯೆಹೋವ ದೇವರ ಮುಂತಿಳಿಸಿದ ವಾಕ್ಯವು ನೆರವೇರುವವರೆಗೆ ಅವನು ದೇವರ ಮಾತಿನಿಂದ ಪರಿಶೋಧಿತನಾದನು.

[20] ಅರಸನು ಅವನನ್ನು ಕರೆದು ಸೆರೆಯಿಂದ ಬಿಡಿಸಿದನು. ಹೌದು, ಜನಗಳ ಅಧಿಪತಿಯಿಂದ ಅವನು ಬಿಡುಗಡೆಯಾದನು.

[21] ಅರಸನು ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ, ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ,

[22] ತನ್ನ ಪ್ರಧಾನರಿಗೆ ತನ್ನ ಇಷ್ಟ ಪ್ರಕಾರ ಶಿಕ್ಷಣ ಕೊಡುವುದಕ್ಕೂ, ತನ್ನ ಜ್ಞಾನವನ್ನು ಮಂತ್ರಿಗಳಿಗೆ ಬೋಧಿಸುವುದಕ್ಕೂ ಯೋಸೇಫನನ್ನು ನೇಮಿಸಿದನು.

[23] ಅನಂತರ ಇಸ್ರಾಯೇಲನು ಈಜಿಪ್ಟಿಗೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.

[24] ದೇವರು ತಮ್ಮ ಜನರನ್ನು ಬಹಳ ಅಭಿವೃದ್ಧಿಗೊಳಿಸಿ, ಅವರನ್ನು ವೈರಿಗಳಿಗಿಂತ ಬಲಿಷ್ಟರನ್ನಾಗಿ ಮಾಡಿದರು.

[25] ತಮ್ಮ ಜನರನ್ನು ದ್ವೇಷಿಸುವಂತೆಯೂ, ತಮ್ಮ ಸೇವಕರನ್ನು ಕುಯುಕ್ತಿಯಿಂದ ನಡೆಸುವಂತೆಯೂ ದೇವರು ಅವರ ಹೃದಯವನ್ನು ಮಾರ್ಪಡಿಸಿದನು.

[26] ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.

[27] ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.

[28] ದೇವರು ಕತ್ತಲೆಯನ್ನು ಕಳುಹಿಸಿ, ದೇಶವನ್ನೆಲ್ಲಾ ಕತ್ತಲು ಮಾಡಿದರು. ದೇವರ ಮಾತಿಗೆ ಈಜಿಪ್ಟನವರು ವಿರೋಧವಾಗಿ ತಿರುಗಿ ಬಿದ್ದರಲ್ಲವೇ?

[29] ದೇವರು ಅವರ ನೀರನ್ನು ರಕ್ತವಾಗಿ ಮಾರ್ಪಡಿಸಿದರು. ಅವರ ಮೀನುಗಳನ್ನು ನಾಶಮಾಡಿದರು.

[30] ಅವರ ದೇಶವು ಕಪ್ಪೆಗಳಿಂದ ತುಂಬಿಕೊಂಡಿತು; ಅವರ ಅರಸುಗಳ ಕೊಠಡಿಗಳಲ್ಲಿ ಸಹ ಅವು ನುಗ್ಗಿದವು.

[31] ದೇವರು ಆಜ್ಞಾಪಿಸಲು ನೊಣದ ಗುಂಪುಗಳೂ, ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.

[32] ದೇವರು ಕಲ್ಮಳೆಯನ್ನೂ, ಅಗ್ನಿ ಜ್ವಾಲೆಗಳನ್ನೂ ಅವರ ದೇಶದಲ್ಲಿ ಬರಮಾಡಿದರು.

[33] ಅವರ ದ್ರಾಕ್ಷಿಯ ಬಳ್ಳಿ, ಅಂಜೂರದ ಗಿಡಗಳು ಹಾಗೂ ಅವರ ಮೇರೆಗಳ ಮರಗಳು ಮುರಿದು ಬಿದ್ದವು.

[34] ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.

[35] ಅವು ಈಜಿಪ್ಟ್ ದೇಶದಲ್ಲಿ ಎಲ್ಲಾ ಸಸ್ಯಗಳನ್ನು ತಿಂದುಬಿಟ್ಟವು; ಅವರ ಭೂಮಿಯ ಫಲಗಳನ್ನು ಸಹ ತಿಂದುಬಿಟ್ಟವು.

[36] ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲ ಮಕ್ಕಳೂ ಅವರ ಎಲ್ಲಾ ಪ್ರಮುಖರೂ ದೇವರ ಬಾಧೆಗೆ ಒಳಗಾದರು.

[37] ದೇವರು ಬೆಳ್ಳಿ ಬಂಗಾರಗಳ ಸಂಗಡ ಇಸ್ರಾಯೇಲರನ್ನು ಹೊರಗೆ ಬರಮಾಡಿದರು. ಅವರ ಗೋತ್ರಗಳಲ್ಲಿ ಬಲಹೀನನಾದ ಒಬ್ಬನೂ ಇರಲಿಲ್ಲ.

[38] ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.

[39] ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.

[40] ಅವರು ಕೇಳಿದಾಗ ದೇವರು ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ಆಹಾರದಿಂದ ಅವರನ್ನು ತೃಪ್ತಿಪಡಿಸಿದರು.

[41] ದೇವರು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಮರುಭೂಮಿಯಲ್ಲಿ ನದಿಯಾಗಿ ಹರಿಯಿತು.

[42] ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.

[43] ದೇವರು ತಮ್ಮ ಜನರನ್ನು ಆನಂದದಿಂದಲೂ, ತಾವು ಆಯ್ದುಕೊಂಡವರನ್ನು ಉತ್ಸಾಹದಿಂದಲೂ ಹೊರತಂದರು.

[44] ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.

[45] ದೇವರ ಸೂತ್ರಗಳನ್ನು ಕೈಗೊಂಡು, ಅವರ ನಿಯಮಗಳನ್ನು ಇಸ್ರಾಯೇಲರು ಕಾಯಬೇಕೆಂಬ ಉದ್ದೇಶದಿಂದಲೇ ಹೀಗೆಲ್ಲಾ ಆಯಿತು. ಯೆಹೋವ ದೇವರನ್ನು ಸ್ತುತಿಸಿರಿ.

ಕೀರ್ತನೆಗಳು — Chapters