Skip to content
Opens in a new window
Listen to this chapter • 2:50

[1] ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ. ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸಿರಿ

[2] ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ. ಕೊಲೆಪಾತಕರಿಂದ ನನ್ನನ್ನು ರಕ್ಷಿಸಿರಿ.

[3] ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ.

[4] ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.

[5] ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.

[6] ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.

[7] ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ. ಅವರ ತುಟಿಗಳಲ್ಲಿ ಖಡ್ಗಗಳು ಇವೆ. ಅವರು, “ನಮ್ಮನ್ನು ಕೇಳುವವರು ಯಾರು?” ಎಂದು ಅಂದುಕೊಳ್ಳುತ್ತಾರೆ.

[8] ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ. ಇತರ ಜನಾಂಗವೆಲ್ಲ ಅಪಹಾಸ್ಯಕ್ಕಿಡಾಗಲಿ.

[9] ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು. ನನ್ನ ದೇವರೇ, ನೀವು ನನ್ನ ಕೋಟೆಯಾಗಿರುವಿರಿ.

[10] ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.

[11] ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ, ನನ್ನ ಜನರು ಮರೆಯದ ಹಾಗೆ ಅವರು ಉಳಿದಿರಲಿ. ನಿಮ್ಮ ಪರಾಕ್ರಮದಿಂದ ಅವರನ್ನು ದಂಡಿಸಿರಿ.

[12] ಅವರ ಬಾಯಿಯ ಪಾಪಕ್ಕೂ, ಅವರ ತುಟಿಗಳ ಮಾತಿಗೂ, ಅವರು ನುಡಿಯುವ ಶಾಪಕ್ಕೂ ಅವರ ಗರ್ವವೇ ಅವರನ್ನು ಹಿಡಿಯಲಿ.

[13] ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.

[14] ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.

[15] ಅವರು ಆಹಾರಕ್ಕಾಗಿ ಅಲೆದಾಡುವರು. ತೃಪ್ತಿಯಾಗದಿದ್ದರೆ ಗೊಣಗುಟ್ಟುವರು.

[16] ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು. ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು. ಏಕೆಂದರೆ ನೀವು ನನಗೆ ಭದ್ರಕೋಟೆಯೂ, ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.

[17] ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು. ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ. ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.

ಕೀರ್ತನೆಗಳು — Chapters