Skip to content
Opens in a new window
Listen to this chapter • 2:42

[1] ಯೆಹೋವ ದೇವರೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.

[2] ದಾವೀದನು ಯೆಹೋವ ದೇವರಿಗೆ ಆಣೆ ಇಟ್ಟು, ಪರಾಕ್ರಮಿಯಾದ ಯಾಕೋಬನ ದೇವರಿಗೆ ಹೀಗೆಂದು ಪ್ರಮಾಣ ಮಾಡಿದನು:

[3] “ಯೆಹೋವ ದೇವರಿಗೆ ಒಂದು ಸ್ಥಳವನ್ನೂ, ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ,

[4] ನಾನು ನನ್ನ ಮನೆ ಸೇರೆನು; ನನ್ನ ಮಂಚವನ್ನು ಏರೆನು.

[5] ನನ್ನ ಕಣ್ಣುಗಳಿಗೆ ನಿದ್ದೆಯನ್ನು ಕೊಡೆನು, ನನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡೆನು.”

[6] ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು:

[7] “ಬನ್ನಿರಿ ನಾವು ದೇವರ ಮಂದಿರಕ್ಕೆ ಹೋಗಿ, ಅವರ ಪಾದಪೀಠದಲ್ಲಿ ಆರಾಧಿಸೋಣ.

[8] ‘ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ.

[9] ನಿಮ್ಮ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ; ನಿಮ್ಮ ಭಕ್ತರು ಉತ್ಸಾಹಧ್ವನಿ ಮಾಡಲಿ.’ ”

[10] ನಿಮ್ಮ ಸೇವಕನಾದ ದಾವೀದನ ನಿಮಿತ್ತ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ.

[11] ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, “ನಿನ್ನ ಸಂತತಿಯವನನ್ನೇ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.

[12] ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, ಕೈಗೊಂಡರೆ, ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.”

[13] ಏಕೆಂದರೆ, ಯೆಹೋವ ದೇವರು ಚೀಯೋನನ್ನು ಆಯ್ದುಕೊಂಡು ಅದನ್ನು ತಮ್ಮ ವಾಸಕ್ಕಾಗಿ ಅಪೇಕ್ಷಿಸಿ ಹೀಗೆಂದಿದ್ದಾರೆ:

[14] “ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯ ಸ್ಥಳವಾಗಿರುವುದು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ; ಇಲ್ಲಿಯೇ ಸಿಂಹಾಸನಾರೂಢನಾಗಿರುವೆನು.

[15] ಧಾರಾಳವಾಗಿ ದವಸಧಾನ್ಯಗಳಿರಲೆಂದು ನಾನು ಚೀಯೋನನ್ನು ಆಶೀರ್ವದಿಸುವೆನು; ಇಲ್ಲಿ ವಾಸಿಸುವ ಬಡವರು ಉಂಡು ಸಂತೃಪ್ತಿಯಿಂದಿರುವರು.

[16] ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು.

[17] “ಇಲ್ಲಿ ದಾವೀದನಿಗೆ ಬಲದಾಯಕ ಅರಸನನ್ನು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.

[18] ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”

ಕೀರ್ತನೆಗಳು — Chapters