[1] ದೇವರೇ, ನಾವು ನಮ್ಮ ಕಿವಿಯಾರೆ ಕೇಳಿದ್ದೇವೆ; ನೀವು ಪೂರ್ವಕಾಲದಲ್ಲಿ ನಮ್ಮ ಪಿತೃಗಳ ದಿವಸಗಳಲ್ಲಿ ಮಾಡಿದ ಕಾರ್ಯವನ್ನು ನಮಗೆ ಅವರು ವಿವರಿಸಿದ್ದಾರೆ.
[2] ನೀವು ನಿಮ್ಮ ಕೈಯಿಂದ ಜನಾಂಗಗಳನ್ನು ಹೊರಡಿಸಿ, ನಮ್ಮ ಪಿತೃಗಳನ್ನು ನೆಲೆಗೊಳಿಸಿದಿರಿ; ನೀವು ವೈರಿಗಳನ್ನು ತೆಗೆದುಹಾಕಿ, ನಮ್ಮ ಪಿತೃಗಳಿಗೆ ಸಮೃದ್ಧಿಯನ್ನುಂಟು ಮಾಡಿದಿರಿ.
[3] ನಮ್ಮ ಪಿತೃಗಳು ತಮ್ಮ ಖಡ್ಗದಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರಿಗೆ ಜಯ ತರಲಿಲ್ಲ; ಆದರೆ ನಿಮ್ಮ ಬಲಗೈಯೂ ನಿಮ್ಮ ತೋಳೂ ನಿಮ್ಮ ಮುಖದ ಪ್ರಕಾಶವೇ ಅವರಿಗೆ ಜಯವನ್ನು ತಂದಿತು. ಏಕೆಂದರೆ ಅವರನ್ನು ನೀವು ಪ್ರೀತಿಸಿದಿರಿ.
[4] ನೀವೇ ನನ್ನ ಅರಸರೂ ದೇವರೂ ಆಗಿದ್ದೀರಿ. ಯಾಕೋಬಿಗೆ ಜಯವನ್ನು ಆಜ್ಞಾಪಿಸುವ ದೇವರಾಗಿದ್ದೀರಿ.
[5] ನಿಮ್ಮಿಂದ ನಮ್ಮ ವೈರಿಗಳನ್ನು ದಬ್ಬುವೆವು; ನಿಮ್ಮ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
[6] ನಾನು ನನ್ನ ಬಿಲ್ಲಿನಲ್ಲಿ ಭರವಸೆ ಇಡುವುದಿಲ್ಲ; ನನ್ನ ಖಡ್ಗವು ನನಗೆ ಜಯ ತರುವುದಿಲ್ಲ.
[7] ಆದರೆ ನೀವು ನಮ್ಮ ವೈರಿಗಳ ಮೇಲೆ ನಮಗೆ ಜಯವನ್ನು ಕೊಟ್ಟಿದ್ದೀರಿ. ನೀವು ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಿರಿ.
[8] ದೇವರಲ್ಲಿ ದಿನವೆಲ್ಲಾ ನಾವು ಹಿಗ್ಗುತ್ತಿದ್ದೇವೆ; ನಿಮ್ಮ ಹೆಸರನ್ನು ಯುಗಯುಗಕ್ಕೂ ಕೊಂಡಾಡುವೆವು.
[9] ಆದರೆ ಈಗ ನೀವು ನಮ್ಮನ್ನು ತಳ್ಳಿಬಿಟ್ಟದ್ದರಿಂದ ನಾವು ಕುಗ್ಗಿಹೋಗಿದ್ದೇವೆ. ನಮ್ಮ ಸೈನ್ಯಗಳ ಸಂಗಡ ನೀವು ಹೊರಡಲಿಲ್ಲ.
[10] ವೈರಿಯ ಮುಂದೆ ನಾವು ಓಡಿಹೋಗುವಂತೆ ಮಾಡಿದ್ದೀರಿ. ನಮ್ಮ ವೈರಿಗಳು ನಮ್ಮ ಸೊತ್ತನ್ನು ಕೊಳ್ಳೆ ಹೊಡೆಯುತ್ತಾರೆ.
[11] ಕಡಿಯತಕ್ಕ ಕುರಿಗಳಂತೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀರಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀರಿ.
[12] ನಿಮ್ಮ ಜನರನ್ನು ನೀವು ಕ್ರಯವಿಲ್ಲದೆ ಮಾರಿಬಿಟ್ಟಂತಿದೆ. ಆ ಮಾರಾಟದಿಂದ ಲಾಭ ಏನೂ ಇಲ್ಲದಂತಿದೆ.
[13] ನಮ್ಮ ನೆರೆಯವರಿಗೆ ನಾವು ನಿಂದೆಯಾಗಿದ್ದೇವೆ. ನಮ್ಮ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವೂ ಆಗಿದ್ದೇವೆ.
[14] ನಮ್ಮನ್ನು ಇತರ ದೇಶಗಳವರ ಗಾದೆಗೆ ಆಸ್ಪದ ಮಾಡಿರುವಿರಿ; ಅವರು ನಮ್ಮನ್ನು ಪರಿಹಾಸ್ಯದ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.
[15] ನಿಂದಕನ ಮತ್ತು ದೂಷಕನ ಮಾತುಗಳಿಗೂ ಮುಯ್ಯಿಗೆ ಮುಯ್ಯಿ ತೀರಿಸುವ ಶತ್ರುವಿನ ನಿಮಿತ್ತವೂ,
[16] ಸದಾ ನನ್ನ ಅವಮಾನವು ನನ್ನ ಮುಂದೆ ಇದೆ; ನನ್ನ ಮುಖವು ನಾಚಿಕೆಯಿಂದ ಮುಚ್ಚಿದೆ.
[17] ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಾವು ನಿಮ್ಮನ್ನು ಮರೆತುಬಿಡಲಿಲ್ಲ; ನಿಮ್ಮ ಒಡಂಬಡಿಕೆಯನ್ನು ಬಿಡಲಿಲ್ಲ.
[18] ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿಮ್ಮ ಹಾದಿಯಿಂದ ತೊಲಗಲಿಲ್ಲ.
[19] ಆದರೂ ನರಿಗಳ ವಾಸಸ್ಥಳದಂತೆ ನಮ್ಮ ದೇಶವಿದೆ. ಕಾರ್ಗತ್ತಲಿನ ನೆರಳು ನಮ್ಮನ್ನು ಮುಚ್ಚಿಬಿಟ್ಟಂತಿದೆ.
[20] ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದ್ದರೆ,
[21] ದೇವರೇ ಹೃದಯದ ರಹಸ್ಯಗಳನ್ನು ತಿಳಿದಿರುವ ನಿಮಗೆ ಅವೆಲ್ಲವೂ ಮರೆಯಾಗಿರುತ್ತಿರಲಿಲ್ಲ.
[22] ಹೌದು, ನಿಮಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ. ವಧಿಸಲಿಕ್ಕಾಗಿರುವ ಕುರಿಗಳಂತೆ ಜನರು ನಮ್ಮನ್ನು ಎಣಿಸಿದ್ದಾರೆ.
[23] ಯೆಹೋವ ದೇವರೇ, ಏಳಿರಿ, ಹೌದು ಎದ್ದೇಳಿರಿ ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡಿರಿ.
[24] ಏಕೆ ನಿಮ್ಮ ಮುಖವನ್ನು ಮರೆಮಾಡಿಕೊಂಡಿದ್ದೀರಿ? ನಮ್ಮ ಸಂಕಟ ಬಾಧೆಗಳನ್ನು ಮರೆತುಬಿಡುವಿರಾ?
[25] ನಮ್ಮ ಪ್ರಾಣವು ಮಣ್ಣು ಪಾಲಾದಂತಿದೆ. ನಮ್ಮ ಶರೀರವು ನೆಲ ಪಾಲಾದಂತಿದೆ.
[26] ನಮಗೆ ಸಹಾಯಕರಾಗಿ ಏಳಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಗಾಗಿ ನಮ್ಮನ್ನು ವಿಮೋಚಿಸಿರಿ.