[1] ಯೆಹೋವ ದೇವರೇ, ನನಗೆ ಉತ್ತರಕೊಡಿರಿ. ನಾನು ದೀನನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ.
[2] ನನ್ನ ಪ್ರಾಣವನ್ನು ಕಾಪಾಡಿರಿ, ನಾನು ನಿಮ್ಮ ಭಕ್ತ, ನೀವು ನನ್ನ ದೇವರು. ನಿಮ್ಮಲ್ಲಿ ಭರವಸವಿಟ್ಟಿರುವ ನಿಮ್ಮ ಸೇವಕನನ್ನು ರಕ್ಷಿಸಿರಿ.
[3] ಯೆಹೋವ ದೇವರೇ, ನನ್ನನ್ನು ಕರುಣಿಸಿರಿ. ನಿಮಗೆ ದಿನವೆಲ್ಲಾ ಮೊರೆಯಿಡುತ್ತೇನೆ.
[4] ನಿಮ್ಮ ಸೇವಕನ ಪ್ರಾಣವನ್ನು ಸಂತೋಷಪಡಿಸಿರಿ. ಯೆಹೋವ ದೇವರೇ, ನಿಮ್ಮಲ್ಲೇ ನನ್ನ ಪ್ರಾಣವನ್ನು ಇಟ್ಟಿದ್ದೇನೆ.
[5] ಯೆಹೋವ ದೇವರೇ, ನೀವು ಒಳ್ಳೆಯವರೂ ಕ್ಷಮಿಸುವುದಕ್ಕೆ ಸಿದ್ಧರೂ ಆಗಿದ್ದೀರಿ. ನಿಮ್ಮನ್ನು ಬೇಡುವವರೆಲ್ಲರಿಗೆ ಪ್ರೀತಿಯಲ್ಲಿ ಸಮೃದ್ಧಿವಂತರೂ ಆಗಿರುವಿರಿ.
[6] ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ. ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸಿರಿ.
[7] ನನ್ನ ಇಕ್ಕಟ್ಟಿನ ದಿವಸದಲ್ಲಿ ನಿಮ್ಮನ್ನು ಕರೆಯುವೆನು. ನೀವು ನನಗೆ ಉತ್ತರ ಕೊಡುವಿರಿ.
[8] ಯೆಹೋವ ದೇವರೇ, ದೇವರುಗಳಲ್ಲಿ ನಿಮ್ಮ ಹಾಗೆ ಯಾರೂ ಇಲ್ಲ. ನಿಮ್ಮ ಕೆಲಸಗಳ ಹಾಗೆ ಒಂದೂ ಇಲ್ಲ.
[9] ಯೆಹೋವ ದೇವರೇ, ನೀವು ಉಂಟುಮಾಡಿದ ಜನಾಂಗದವರೆಲ್ಲರೂ ಬಂದು ನಿಮ್ಮ ಮುಂದೆ ಅಡ್ಡಬಿದ್ದು, ನಿಮ್ಮ ಹೆಸರಿಗೆ ಮಹಿಮೆ ಸಲ್ಲಿಸುವರು.
[10] ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.
[11] ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ. ಆಗ, ನಿಮ್ಮ ಸತ್ಯದಲ್ಲಿ ನಡೆದುಕೊಳ್ಳುವೆನು; ನಿಮ್ಮ ಹೆಸರಿಗೆ ಭಯಪಡುವಂತೆ ನನಗೆ ವಿಭಾಗವಿಲ್ಲದೆ ಹೃದಯವನ್ನು ದಯಪಾಲಿಸಿರಿ.
[12] ನನ್ನ ದೇವರಾದ ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಕೊಂಡಾಡುವೆನು. ನಿಮ್ಮ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
[13] ನಿಮ್ಮ ಪ್ರೀತಿಯು ನನ್ನ ಮೇಲೆ ಅಗಾಧವಾಗಿದೆ. ಕೆಳಗಿನ ಪಾತಾಳದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀರಿ.
[14] ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ. ಬಲಾತ್ಕಾರಿಗಳ ಗುಂಪು ನನ್ನ ಪ್ರಾಣವನ್ನು ಹುಡುಕುತ್ತದೆ. ಅವರು ನಿಮ್ಮನ್ನು ಗೌರವಿಸುವವರಲ್ಲ.
[15] ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ.
[16] ನನ್ನ ಕಡೆಗೆ ತಿರುಗಿಕೊಂಡು ನನ್ನನ್ನು ಕರುಣಿಸಿರಿ. ನಿಮ್ಮ ಸೇವಕನಿಗೆ ನಿಮ್ಮ ಬಲವನ್ನು ತೋರಿಸಿರಿ. ನನ್ನ ತಾಯಿ ನಿನ್ನ ಸೇವೆಮಾಡಿದಂತೆ ನಾನು ಸಹ ಸೇವೆಮಾಡುವುದರಿಂದ ನನ್ನನ್ನು ರಕ್ಷಿಸಿರಿ.
[17] ನನಗಾಗಿ ನಿಮ್ಮ ಉಪಕಾರದ ಗುರುತೊಂದನ್ನು ತೋರಿಸಿರಿ. ಆಗ ನನ್ನ ವೈರಿಗಳು ಅದನ್ನು ಕಂಡು ನಾಚಿಕೆಪಡುವರು. ಏಕೆಂದರೆ ಯೆಹೋವ ದೇವರೇ, ನೀವು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀರಿ.