Skip to content
Opens in a new window
Listen to this chapter • 2:45

[1] ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹಧ್ವನಿ ಮಾಡಿರಿ.

[2] ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.

[3] ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.

[4] ಭೂಮಿಯೆಲ್ಲಾ ನಿಮ್ಮನ್ನು ಆರಾಧಿಸುವುದು. ನಿಮ್ಮನ್ನು ಕೀರ್ತಿಸುತ್ತಾ ಲೋಕವು ನಿಮ್ಮ ನಾಮವನ್ನು ಕೀರ್ತಿಸುತ್ತಿರುವುದು,” ಎಂದು ಹೇಳಿರಿ.

[5] ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಮಾನವರ ಪರವಾಗಿ ಮಾಡಿರುವ ದೇವರ ಕಾರ್ಯಗಳು ಅತಿಶಯವಾಗಿವೆ.

[6] ದೇವರು ಸಮುದ್ರವನ್ನು ಒಣ ಭೂಮಿಯನ್ನಾಗಿ ಮಾಡಿದರು. ಜನರು ಕಾಲಿನಿಂದ ನದಿಯನ್ನು ದಾಟಿದರು. ಬನ್ನಿರಿ, ದೇವರಲ್ಲಿ ಆನಂದಿಸೋಣ.

[7] ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.

[8] ಸಮಸ್ತ ಜನರೇ, ನೀವು ನಮ್ಮ ದೇವರನ್ನು ಸ್ತುತಿಸಿರಿ. ದೇವರನ್ನು ಸ್ತುತಿಸುವ ಶಬ್ದವು ಕೇಳಿಸಲಿ.

[9] ದೇವರು ನಮ್ಮ ಜೀವನವನ್ನು ಕಾಪಾಡಿ, ನಮ್ಮ ಕಾಲು ಎಡವದಂತೆ ಮಾಡಿದ್ದಾರೆ.

[10] ದೇವರೇ, ನೀವು ನಮ್ಮನ್ನು ಪರಿಶೋಧಿಸಿದ್ದೀರಿ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶುದ್ಧೀಕರಿಸಿದ್ದೀರಿ.

[11] ನೀವು ಬಲೆಯೊಳಗೆ ನಮ್ಮನ್ನು ಸಿಕ್ಕಿಸಿದ್ದೀರಿ. ನಮ್ಮ ಬೆನ್ನಿನ ಮೇಲೆ ಭಾರವನ್ನು ಹೊರಿಸಿದ್ದೀರಿ.

[12] ಮನುಷ್ಯರು ನಮ್ಮ ತಲೆ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀರಿ. ನಾವು ಬೆಂಕಿಯನ್ನೂ ನೀರನ್ನೂ ದಾಟುವಂತೆ ಮಾಡಿದ್ದೀರಿ. ಆದರೆ ನೀವು ನಮ್ಮನ್ನು ಸಮೃದ್ಧಿಯ ಸ್ಥಳದೊಳಗೆ ಬರಮಾಡಿದ್ದೀರಿ.

[13] ನಾನು ದಹನಬಲಿಯೊಂದಿಗೆ ನಿಮ್ಮ ಆಲಯಕ್ಕೆ ಬರುವೆನು.

[14] ನನ್ನ ಇಕ್ಕಟ್ಟಿನಲ್ಲಿ ತುಟಿ ಬಿಚ್ಚಿ ನನ್ನ ಬಾಯಿಂದ ನುಡಿದ ನನ್ನ ಹರಕೆಗಳನ್ನು ನಾನು ನಿಮಗೆ ಸಲ್ಲಿಸುವೆನು.

[15] ಕೊಬ್ಬಿದ ದಹನಬಲಿಗಳನ್ನು ಕಾಣಿಕೆಯಾಗಿ ಟಗರುಗಳನ್ನು; ಹೋತ ಹೋರಿಗಳ ಯಜ್ಞವನ್ನು ಅರ್ಪಿಸುವೆನು.

[16] ಸಮಸ್ತ ದೇವಭಕ್ತರೇ, ಬಂದು ಕೇಳಿರಿ. ದೇವರು ನನಗೆ ಮಾಡಿದ್ದನ್ನು ನಾನು ನಿಮಗೆ ತಿಳಿಸುವೆನು.

[17] ನನ್ನ ದೇವರಿಗೆ ಮೊರೆಯಿಟ್ಟೆನು, ನನ್ನ ನಾಲಿಗೆಯಲ್ಲಿ ದೇವರ ಸ್ತೋತ್ರವಿತ್ತು.

[18] ಪಾಪವನ್ನು ನಾನು ನನ್ನ ಹೃದಯದಲ್ಲಿ ಬೆಳೆಸಿಕೊಂಡಿದ್ದರೆ, ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಕೇಳುತ್ತಿರಲಿಲ್ಲ.

[19] ಆದರೆ ಈಗ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾರೆ.

[20] ನನ್ನ ಪ್ರಾರ್ಥನೆಯನ್ನು ತಿರಸ್ಕರಿಸದ ದೇವರಿಗೆ ಸ್ತೋತ್ರವಾಗಲಿ. ತಮ್ಮ ಪ್ರೀತಿಯನ್ನು ನನ್ನಿಂದ ತೊಲಗಿಸದೆ ಇರುವೆ. ದೇವರಿಗೆ ಸ್ತೋತ್ರವಾಗಲಿ.

ಕೀರ್ತನೆಗಳು — Chapters