Skip to content
Opens in a new window
Listen to this chapter • 3:00

[1] ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನನ್ನು ಕರುಣಿಸಿರಿ. ನಿಮ್ಮ ಮಹಾ ಅನುಕಂಪಕ್ಕೆ ಅನುಸಾರವಾಗಿ ನನ್ನ ಅತಿಕ್ರಮಗಳನ್ನು ಅಳಿಸಿಬಿಡಿರಿ.

[2] ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ತೊಳೆದುಬಿಡಿರಿ; ನನ್ನ ಪಾಪದಿಂದ ನನ್ನನ್ನು ಶುದ್ಧಮಾಡಿರಿ.

[3] ನನ್ನ ಅತಿಕ್ರಮಗಳನ್ನು ನಾನೇ ತಿಳಿದಿದ್ದೇನೆ, ನನ್ನ ಪಾಪವು ಯಾವಾಗಲೂ ನನ್ನ ಕಣ್ಮುಂದೆಯೇ ಇದೆ.

[4] ನಿಮಗೇ ನಿಮಗೊಬ್ಬರಿಗೆ ಮಾತ್ರ ವಿರೋಧವಾಗಿ ನಾನು ಪಾಪಮಾಡಿ, ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದ್ದನ್ನೇ ಮಾಡಿದ್ದೇನೆ. ಹೀಗೆ ನೀವು ನ್ಯಾಯತೀರಿಸುವಾಗ ನೀತಿವಂತರಾಗಿಯೂ ನೀವು ತೀರ್ಪು ನಿರ್ಣಯಿಸುವಾಗ ನ್ಯಾಯವಂತರಾಗಿಯೂ ಇರುವಿರಿ.

[5] ಹುಟ್ಟಿದಂದಿನಿಂದಲೇ ನಾನು ಪಾಪಿ. ನನ್ನ ತಾಯಿ ನನ್ನನ್ನು ಗರ್ಭಧರಿಸಿದಾಗಲೇ ನಾನು ಪಾಪಿಯೇ.

[6] ಆದರೂ ಅಂತರಂಗದಲ್ಲಿ ನೀವು ಯಥಾರ್ಥವನ್ನು ಬಯಸುತ್ತೀರಿ. ನೀವು ಹೃದಯದ ಆಂತರ್ಯದಲ್ಲಿ ನನಗೆ ಜ್ಞಾನವನ್ನು ಬೋಧಿಸಿದ್ದೀರಿ.

[7] ಹಿಸ್ಸೋಪಿನಿಂದ ನನ್ನನ್ನು ಶುಚಿಮಾಡಿರಿ, ಆಗ ನಾನು ಶುದ್ಧನಾಗುವೆನು. ನನ್ನನ್ನು ತೊಳೆಯಿರಿ, ಆಗ ಹಿಮಕ್ಕಿಂತ ಬೆಳ್ಳಗಾಗುವೆನು.

[8] ನಾನು ಆನಂದವನ್ನೂ ಹರ್ಷವನ್ನೂ ಕೇಳುವಂತೆ ಮಾಡಿರಿ; ನೀವು ಜಜ್ಜಿದ ಎಲುಬುಗಳು ಆನಂದಪಡಲಿ.

[9] ನನ್ನ ಪಾಪಗಳಿಗೆ ನಿಮ್ಮ ಮುಖವನ್ನು ಮರೆಮಾಡಿಕೊಳ್ಳಿರಿ; ನನ್ನ ಅಧರ್ಮಗಳನ್ನೆಲ್ಲಾ ಅಳಿಸಿಬಿಡಿರಿ.

[10] ಓ ದೇವರೇ, ಶುದ್ಧ ಹೃದಯವನ್ನು ನನ್ನಲ್ಲಿ ಸೃಷ್ಟಿಮಾಡಿರಿ, ಸ್ಥಿರವಾದ ಆತ್ಮವನ್ನು ನನ್ನಲ್ಲಿ ನವೀಕರಿಸಿರಿ.

[11] ನಿಮ್ಮ ಸನ್ನಿಧಿಯಿಂದ ನನ್ನನ್ನು ಹೊರ ದೂಡಬೇಡಿರಿ; ನಿಮ್ಮ ಪರಿಶುದ್ಧಾತ್ಮರನ್ನು ನನ್ನಿಂದ ತೆಗೆಯಬೇಡಿರಿ.

[12] ನಿಮ್ಮ ರಕ್ಷಣೆಯ ಆನಂದವನ್ನು ನನಗೆ ಪುನಃ ಸ್ಥಾಪಿಸಿರಿ; ನನಗೆ ಸಿದ್ಧ ಆತ್ಮವನ್ನು ನೀಡಿ, ನನ್ನನ್ನು ಬೆಂಬಲಿಸಿರಿ.

[13] ಆಗ ನಾನು ಅತಿಕ್ರಮಿಸಿದವರಿಗೆ ನಿಮ್ಮ ಮಾರ್ಗಗಳನ್ನು ಬೋಧಿಸುವೆನು; ಮತ್ತು ಪಾಪಿಗಳು ನಿಮ್ಮ ಕಡೆಗೆ ತಿರುಗಿಕೊಳ್ಳುವರು.

[14] ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧದಿಂದ ನನ್ನನ್ನು ಬಿಡಿಸಿರಿ, ನನ್ನ ನಾಲಿಗೆಯು ನಿಮ್ಮ ನೀತಿಯನ್ನು ಹಾಡುವುದು.

[15] ಕರ್ತಾ, ನನ್ನ ತುಟಿಗಳನ್ನು ತೆರೆಯಿರಿ. ಆಗ ನನ್ನ ಬಾಯಿ ನಿಮ್ಮ ಸ್ತೋತ್ರವನ್ನು ಪ್ರಸಿದ್ಧಿ ಮಾಡುವುದು.

[16] ಯಜ್ಞವನ್ನು ನೀವು ಇಷ್ಟಪಡುವುದಿಲ್ಲ, ಇಲ್ಲವಾದರೆ ನಾನು ಅದನ್ನು ತರುತ್ತಿದ್ದೆನು. ದಹನಬಲಿಗಳಲ್ಲಿ ನೀವು ಸಂತೋಷಪಡುವುದಿಲ್ಲ.

[17] ಓ ದೇವರೇ, ನಿಮಗೆ ಇಷ್ಟವಾದ ಯಜ್ಞಗಳು ಮುರಿದ ಆತ್ಮವೇ. ಮುರಿದಂಥ, ಜಜ್ಜಿದಂಥ ಹೃದಯವನ್ನು ದೇವರು ತಿರಸ್ಕರಿಸುವುದಿಲ್ಲ.

[18] ನಿಮ್ಮ ಮೆಚ್ಚುಗೆಯಿಂದ ಚೀಯೋನಿಗೆ ಸಮೃದ್ಧಿಯನ್ನು ನೀಡಿರಿ, ಯೆರೂಸಲೇಮಿನ ಗೋಡೆಗಳನ್ನು ಕಟ್ಟಿರಿ.

[19] ಆಗ ನೀತಿಯ ಯಜ್ಞಗಳಲ್ಲಿಯೂ ಸಂಪೂರ್ಣ ದಹನಬಲಿಗಳಲ್ಲಿಯೂ, ನೀವು ಸಂತೋಷಪಡುವಿರಿ; ಆಗ ನಿಮ್ಮ ಬಲಿಪೀಠದ ಮೇಲೆ ಹೋರಿಗಳನ್ನು ಅರ್ಪಿಸಲಾಗುವುದು.

ಕೀರ್ತನೆಗಳು — Chapters