[1] ನೀತಿವಂತರೇ, ಯೆಹೋವ ದೇವರಿಗಾಗಿ ಸಂತೋಷದಿಂದ ಹಾಡಿರಿ; ಯಥಾರ್ಥರು ಅವರನ್ನು ಕೊಂಡಾಡುವುದು ಯೋಗ್ಯವಾಗಿದೆ.
[2] ಯೆಹೋವ ದೇವರನ್ನು ಕಿನ್ನರಿಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಅವರನ್ನು ಕೀರ್ತಿಸಿರಿ.
[3] ದೇವರಿಗೆ ಹೊಸಹಾಡನ್ನು ಹಾಡಿರಿ. ದೊಡ್ಡ ಶಬ್ದದಿಂದ ಇಂಪಾಗಿ ಹಾಡಿರಿ.
[4] ಏಕೆಂದರೆ ಯೆಹೋವ ದೇವರ ವಾಕ್ಯವು ಯಥಾರ್ಥವೂ ಸತ್ಯವೂ ಆಗಿರುತ್ತವೆ. ಅವರ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಂಬಿಗಸ್ತರಾಗಿರುತ್ತಾರೆ.
[5] ಅವರು ನೀತಿಯನ್ನೂ, ನ್ಯಾಯವನ್ನೂ ಪ್ರೀತಿಸುತ್ತಾರೆ; ಭೂಲೋಕವೆಲ್ಲಾ ಯೆಹೋವ ದೇವರ ಒಡಂಬಡಿಕೆಯ ಪ್ರೀತಿಯಿಂದ ತುಂಬಿದೆ.
[6] ಯೆಹೋವ ದೇವರ ವಾಕ್ಯದಿಂದ ಆಕಾಶವೂ, ಅವರ ಬಾಯಿಯ ಉಸಿರಿನಿಂದ ನಕ್ಷತ್ರ ಮಂಡಲವೂ ಉಂಟಾದವು.
[7] ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ; ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.
[8] ಭೂಲೋಕವೆಲ್ಲಾ ಯೆಹೋವ ದೇವರಿಗೆ ಭಯಪಡಲಿ; ಭೂಲೋಕ ನಿವಾಸಿಗಳೆಲ್ಲರೂ ಅವರಿಗೆ ಭಯಭಕ್ತಿಯಿಂದಿರಲಿ.
[9] ಏಕೆಂದರೆ ಅವರು ಹೇಳಿದ ಮಾತ್ರಕ್ಕೆ ಸಮಸ್ತವೂ ಸೃಷ್ಟಿಯಾಯಿತು; ಅವರು ಆಜ್ಞಾಪಿಸಲು ಭೂಲೋಕವು ಸ್ಥಿರವಾಯಿತು.
[10] ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.
[11] ಆದರೆ ಯೆಹೋವ ದೇವರ ಆಲೋಚನೆಗಳು ಎಂದೆಂದಿಗೂ ಅವರ ಹೃದಯದ ಉದ್ದೇಶಗಳು ತಲತಲಾಂತರಕ್ಕೂ ನಿಲ್ಲುತ್ತವೆ.
[12] ಯೆಹೋವ ದೇವರು ಯಾರ ದೇವರಾಗಿದ್ದಾರೋ, ಅಂಥ ಭಾಗ್ಯವಂತರು. ದೇವರು ತಮಗಾಗಿ ಆಯ್ದುಕೊಂಡ ಜನರೂ ಭಾಗ್ಯವಂತರು.
[13] ಪರಲೋಕದಿಂದ ಯೆಹೋವ ದೇವರು ದೃಷ್ಟಿಸಿ, ಮಾನವರೆಲ್ಲರನ್ನೂ ನೋಡುತ್ತಾರೆ.
[14] ತಮ್ಮ ನಿವಾಸ ಸ್ಥಳದಿಂದ ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.
[15] ಎಲ್ಲರ ಹೃದಯಗಳನ್ನು ರೂಪಿಸುವವರು ದೇವರೇ, ಜನರು ಮಾಡುವ ಕೆಲಸಗಳನ್ನೆಲ್ಲಾ ಗಮನಿಸುವವರೂ ಅವರೇ.
[16] ಅಧಿಕ ಸೈನ್ಯದಿಂದ ಅರಸನು ಜಯಹೊಂದುವುದಿಲ್ಲ; ಪರಾಕ್ರಮಶಾಲಿಯು ಅಧಿಕ ಶಕ್ತಿಯಿಂದ ಬಿಡುಗಡೆಯಾಗುವುದಿಲ್ಲ.
[17] ಬಿಡುಗಡೆಗೆ ಕುದುರೆಯ ಬಲ ವ್ಯರ್ಥವಾಗಿದೆ; ಅದಕ್ಕೆ ಮಹಾಶಕ್ತಿ ಇದ್ದರೂ ಅದು ರಕ್ಷಿಸಲಾರದು.
[18] ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ, ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.
[19] ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ, ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.
[20] ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ; ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.
[21] ದೇವರಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಅವರ ಪರಿಶುದ್ಧ ಹೆಸರಿನಲ್ಲಿ ಭರವಸೆ ಇಟ್ಟಿದ್ದೇವೆ.
[22] ನಾವು ನಿಮ್ಮನ್ನು ನಿರೀಕ್ಷಿಸುವ ಪ್ರಕಾರ, ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನಮ್ಮ ಮೇಲೆ ಇರಲಿ.