[1] ಎಲ್ಲಾ ಜನರೇ, ಕೈ ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
[2] ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.
[3] ಜನರನ್ನು ನಮ್ಮ ಕೆಳಗೆ ತಂದಿದ್ದಾರೆ. ಜನಾಂಗಗಳನ್ನು ನಮಗೆ ಅಧೀನಮಾಡಿದ್ದಾರೆ.
[4] ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.
[5] ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ. ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.
[6] ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ; ನಮ್ಮ ರಾಜರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ.
[7] ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು. ದೇವರನ್ನು ಸ್ತೋತ್ರದ ಕೀರ್ತನೆಯಿಂದ ಕೀರ್ತಿಸಿರಿ.
[8] ದೇವರು ಜನಾಂಗಗಳನ್ನು ಆಳುತ್ತಾರೆ. ದೇವರು ತಮ್ಮ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾರೆ.
[9] ರಾಷ್ಟ್ರಗಳ ಅಧಿಪತಿಗಳು ಅಬ್ರಹಾಮನ ದೇವರ ಜನರಾಗಿ ಕೂಡಿಬಂದಿದ್ದಾರೆ. ಏಕೆಂದರೆ, ಭೂಮಿಯ ರಾಜರೆಲ್ಲರೂ ದೇವರಿಗೆ ಸೇರಿದವರು. ದೇವರು ಬಹಳವಾಗಿ ಘನ ಹೊಂದಿದ್ದಾರೆ.