[1] ಬಡವರನ್ನು ಪರಾಮರಿಸುವವರು ಧನ್ಯರು; ಕೇಡಿನ ಸಮಯದಲ್ಲಿ ಯೆಹೋವ ದೇವರು ಅವರನ್ನು ತಪ್ಪಿಸುವರು.
[2] ಯೆಹೋವ ದೇವರು ಅವರನ್ನು ಕಾಪಾಡಿ ಸುರಕ್ಷಿತವಾಗಿಡುವರು; ಅವರು ಭೂಮಿಯಲ್ಲಿ ಧನ್ಯರಾಗಿರುವರು; ದೇವರು ಅವರ ಶತ್ರುಗಳ ಇಚ್ಛೆಗೆ ಅವರನ್ನು ಒಪ್ಪಿಸಿಕೊಡರು.
[3] ಬಡವರನ್ನು ಪರಾಮರಿಸುವವರನ್ನು ಯೆಹೋವ ದೇವರು ವ್ಯಾಧಿಯ ಮಂಚದಲ್ಲಿ ಬಲಪಡಿಸುವರು; ಅವರ ಅಸ್ವಸ್ಥತೆಯನ್ನು ಯೆಹೋವ ದೇವರು ಹೋಗಲಾಡಿಸಿ ಮರುಸ್ಥಾಪಿಸುವರು.
[4] “ಯೆಹೋವ ದೇವರೇ, ನನಗೆ ಕರುಣೆ ತೋರಿಸಿ ನನ್ನನ್ನು ಸ್ವಸ್ಥಮಾಡಿರಿ, ಏಕೆಂದರೆ ನಿಮಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದು ನಾನು ಹೇಳಿ ಬೇಡುವೆನು.
[5] “ಅವನು ಸತ್ತು ಅವನ ಹೆಸರು ನಾಶವಾಗುವುದು ಯಾವಾಗ?” ಎಂದು ನನ್ನ ಶತ್ರುಗಳು ನನ್ನ ಕೇಡನ್ನು ಬಯಸಿ ಮಾತನಾಡುತ್ತಾರೆ.
[6] ನನ್ನನ್ನು ನೋಡುವುದಕ್ಕೆ ಅವರಲ್ಲಿ ಒಬ್ಬನು ಬಂದರೆ, ಕಪಟವಾಗಿ ಮಾತನಾಡುತ್ತಾನೆ. ಅವನ ಹೃದಯ ಕೇಡನ್ನು ಕೂಡಿಟ್ಟುಕೊಳ್ಳುತ್ತಿದೆ. ಅವನು ಹೊರಗೆ ಹೋದ ಮೇಲೆ ಕೇಡನ್ನು ಹಬ್ಬಿಸುತ್ತಾನೆ.
[7] ನನ್ನ ಶತ್ರುಗಳೆಲ್ಲರೂ ಸೇರಿ ನನ್ನ ಮೇಲೆ ಪಿಸುಗುಟ್ಟುತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ.
[8] “ಕೆಟ್ಟ ರೋಗವು ಅವನನ್ನು ಹಿಡಿದಿದೆ, ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,” ಎಂದು ಹೇಳಿಕೊಳ್ಳುತ್ತಾರೆ.
[9] ನನ್ನ ರೊಟ್ಟಿಯನ್ನು ತಿಂದವನೂ ನಾನು ನಂಬಿದ್ದವನೂ ಆಗಿರುವ ನನ್ನ ಆಪ್ತ ಸ್ನೇಹಿತನು ಸಹ ನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ.
[10] ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ. ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು.
[11] ನನ್ನ ಶತ್ರು ನನ್ನ ಮೇಲೆ ಜಯ ಹೊಂದದೆ ಇರುವುದರಿಂದಲೇ, ನೀವು ನನ್ನನ್ನು ಮೆಚ್ಚಿದ್ದೀರಿ ಎಂದು ನಾನು ತಿಳಿದುಕೊಳ್ಳುವೆ.
[12] ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ; ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ.
[13] ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ, ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಆಮೆನ್.