[1] ದೇವರೇ, ನಿಮ್ಮ ನ್ಯಾಯವನ್ನು ಅರಸನಿಗೆ ಕಲಿಸಿಕೊಡಿರಿ. ನಿಮ್ಮ ನೀತಿಯನ್ನು ರಾಜಕುಮಾರನಿಗೆ ಕಲಿಸಿಕೊಡಿರಿ.
[2] ಅರಸನು ನಿಮ್ಮ ಜನರಿಗೆ ನೀತಿಯಿಂದಲೂ ನಿಮ್ಮ ಬಾಧೆಪಟ್ಟ ಪ್ರಜೆಗೆ ನ್ಯಾಯದಿಂದಲೂ ತೀರ್ಪುಮಾಡಲಿ.
[3] ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ ನೀತಿಯ ಫಲವೂ ಜನರಿಗೆ ಬರಲಿ.
[4] ಅರಸನು ಬಡವರ ನ್ಯಾಯ ಸ್ಥಾಪಿಸಲಿ. ಅವನು ಅಗತ್ಯತೆಯಲ್ಲಿರುವವರ ಮಕ್ಕಳನ್ನು ರಕ್ಷಿಸಲಿ. ದಬ್ಬಾಳಿಕೆ ಮಾಡುವವರನ್ನು ದಂಡಿಸಲಿ.
[5] ಸೂರ್ಯನೂ ಚಂದ್ರನೂ ಇರುವವರೆಗೆ ತಲತಲಾಂತರಗಳು ಜನರು ಅರಸನಿಗೆ ಭಯಪಡಲಿ.
[6] ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ, ಭೂಮಿಯನ್ನು ನೆನಸುತ್ತಾ ಸುರಿಯುವ ಮಳೆಗಳ ಹಾಗೆಯೂ ಅರಸನು ಇರಲಿ.
[7] ಅರಸನ ದಿವಸಗಳಲ್ಲಿ ನೀತಿವಂತರು ವೃದ್ಧಿ ಆಗಲಿ. ಸಮೃದ್ಧಿಯಾದ ಸಮಾಧಾನವು ಚಂದ್ರನು ಇರುವವರೆಗೂ ಇರಲಿ.
[8] ಸಮುದ್ರದಿಂದ ಸಮುದ್ರದವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಅರಸನು ಆಳಲಿ.
[9] ಅರಸನ ಮುಂದೆ ಮರುಭೂಮಿಯ ನಿವಾಸಿಗಳು ಎರಗಲಿ. ಅರಸನ ಶತ್ರುಗಳು ಧೂಳನ್ನು ನೆಕ್ಕಲಿ.
[10] ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ಅರಸನಿಗೆ ಸಲ್ಲಿಸಲಿ. ಶೆಬ ಮತ್ತು ಸೆಬದ ಅರಸರು ದಾನಗಳನ್ನು ತಂದೊಪ್ಪಿಸಲಿ.
[11] ಹೌದು, ಎಲ್ಲಾ ಅರಸರು ನಮ್ಮ ಅರಸನ ಮುಂದೆ ಅಡ್ಡಬೀಳಲಿ. ಎಲ್ಲಾ ಜನಾಂಗಗಳು ಅರಸನಿಗೆ ಸೇವೆಸಲ್ಲಿಸಲಿ.
[12] ಏಕೆಂದರೆ ಅರಸನಿಗೆ ಮೊರೆಯಿಡುವ ಬಡವರನ್ನೂ ಸಹಾಯಕನಿಲ್ಲದ ಬಾಧೆಪಡುವವರನ್ನೂ ಬಿಡಿಸುವನು.
[13] ದರಿದ್ರನನ್ನೂ, ಬಡವನನ್ನೂ ಕರುಣಿಸುವನು. ಬಡವರ ಪ್ರಾಣಗಳನ್ನು ರಕ್ಷಿಸುವನು.
[14] ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು. ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.
[15] ಅರಸನು ಬಾಳಲಿ. ಆತನಿಗೆ ಶೆಬದ ಚಿನ್ನವನ್ನು ಕೊಡಲಿ. ಆತನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡಲಿ. ಇಡೀ ದಿನ ಆತನಿಗೆ ಆಶೀರ್ವಾದಗಳು ಉಂಟಾಗಲಿ.
[16] ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರಲಿ; ಅದರ ಫಲವು ಲೆಬನೋನಿನ ಹಾಗೆ ಸಮೃದ್ಧಿಯಾಗಲಿ; ಪಟ್ಟಣದವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿ ಆಗಲಿ.
[17] ಅರಸನ ನಾಮವು ಎಂದೆಂದಿಗೂ ಇರಲಿ. ಸೂರ್ಯನಿರುವವರೆಗೂ ಆತನ ಹೆಸರು ಇರಲಿ. ಮನುಷ್ಯರು ಅರಸನಲ್ಲಿ ಆಶೀರ್ವಾದ ಹೊಂದಲಿ. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತನೆಂದು ಕರೆಯಲಿ.
[18] ಅದ್ಭುತಗಳನ್ನು ಮಾಡುವುದರಲ್ಲಿ ಸರಿಸಾಟಿಯಿಲ್ಲದ ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.
[19] ದೇವರ ಘನವುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ. ದೇವರ ತೇಜಸ್ಸು ಭೂಮಿಯಲ್ಲೆಲ್ಲಾ ತುಂಬಲಿ. ಆಮೆನ್, ಆಮೆನ್.
[20] ಇಷಯನ ಮಗ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.