[1] ಮಂದೆಯಂತೆ ಯೋಸೇಫ್ಯರನ್ನು ನಡೆಸುವ ಇಸ್ರಾಯೇಲರ ಕುರುಬ ಆಗಿರುವ ದೇವರೇ, ಕಿವಿಗೊಡಿರಿ. ಕೆರೂಬಿಗಳ ಮಧ್ಯದಲ್ಲಿ ಆಸೀನವಾಗಿರುವ ದೇವರೇ ಪ್ರಕಾಶಿಸಿರಿ.
[2] ಎಫ್ರಾಯೀಮ್, ಬೆನ್ಯಾಮೀನ್, ಮನಸ್ಸೆಯರ ಮುಂದೆ ನಿಮ್ಮ ಪರಾಕ್ರಮವನ್ನು ತೋರಿಸಲು ಬಂದು ನಮ್ಮನ್ನು ರಕ್ಷಿಸಿರಿ.
[3] ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.
[4] ಸರ್ವಶಕ್ತ ದೇವರಾಗಿರುವ ಯೆಹೋವ ದೇವರೇ, ಎಷ್ಟರವರೆಗೆ ನಿಮ್ಮ ಜನರ ಪ್ರಾರ್ಥನೆಗೆ ವಿರೋಧವಾಗಿ ಬೇಸರಗೊಳ್ಳುವಿರಿ?
[5] ರೋದನವೇ ನಮ್ಮ ಅನ್ನವಾಗುವಂತೆಯೂ ಅಶ್ರುಧಾರೆಯೇ ಪಾನವಾಗುವಂತೆಯೂ ಅನುಮತಿಸಿದ್ದೀರಿ.
[6] ನಮ್ಮ ನೆರೆಯವರ ವಿವಾದಕ್ಕೆ ನಮ್ಮನ್ನು ಗುರಿಮಾಡಿದ್ದೀರಿ. ನಮ್ಮ ಶತ್ರುಗಳು ನಮ್ಮನ್ನು ಅಪಹಾಸ್ಯ ಮಾಡುತ್ತಾರೆ.
[7] ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.
[8] ನೀವು ದ್ರಾಕ್ಷಾಲತೆಯನ್ನು ಈಜಿಪ್ಟಿನಿಂದ ತಂದು, ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿದ್ದೀರಿ.
[9] ಅದಕ್ಕಾಗಿ ಸ್ಥಳ ಸಿದ್ಧಮಾಡಿದಿರಿ. ಆಗ ಅದು ಬೇರೂರಿ ದೇಶವನ್ನು ತುಂಬಿತು.
[10] ಅದರ ನೆರಳಿನಿಂದ ಬೆಟ್ಟಗಳೂ ಅದರ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲಾದವು.
[11] ಅದು ತನ್ನ ರೆಂಬೆಗಳನ್ನು ಸಮುದ್ರದವರೆಗೂ, ತನ್ನ ಬಳ್ಳಿಗಳನ್ನು ನದಿಯವರೆಗೂ ಹರಡಿಸಿತು.
[12] ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ?
[13] ಅಡವಿಯಿಂದ ಬಂದ ಹಂದಿಗಳು ಅದನ್ನು ಹಾಳು ಮಾಡುತ್ತವೆ; ಕಾಡಿನ ಮೃಗಗಳು ಅದನ್ನು ತಿಂದು ಹಾಕುತ್ತವೆ.
[14] ಸೇನಾಧೀಶ್ವರ ದೇವರೇ, ನಿಮ್ಮ ದರ್ಶನವಾಗಲಿ. ನೀವು ಪರಲೋಕದಿಂದ ಕಟಾಕ್ಷಿಸಿರಿ. ಈ ದ್ರಾಕ್ಷಾಲತೆಯನ್ನು ಪರಾಮರಿಸಿರಿ.
[15] ನಿಮ್ಮ ಬಲಗೈ ನೆಟ್ಟ ಸಸಿಯನ್ನೂ ನೀವು ನಿಮಗೆ ಬೆಳಸಿಕೊಂಡ ಬಳ್ಳಿಯನ್ನೂ ಪರಾಮರಿಸಿರಿ.
[16] ನಿಮ್ಮ ದ್ರಾಕ್ಷಿಬಳ್ಳಿ ಕಡಿದು ಬೆಂಕಿಯಿಂದ ಸುಡಲಾಗಿದೆ. ನೀವು ಖಂಡಿಸಲು ನಿಮ್ಮ ಜನರು ಬಾಧಿತರಾಗಿ ಹೋಗುವರು.
[17] ನಿಮ್ಮ ಬಲಗಡೆಯಲ್ಲಿರುವಾತನ ಮೇಲೆ ನಿಮ್ಮ ಹಸ್ತವಿರಲಿ. ನಿಮಗಾಗಿ ಆ ನರಪುತ್ರನನ್ನು ಎಬ್ಬಿಸಿದ್ದೀರಿ.
[18] ಆಗ ನಾವು ನಿಮ್ಮಿಂದ ತೊಲಗುವುದಿಲ್ಲ. ನಮ್ಮನ್ನು ಉಜ್ಜೀವಿಸಿರಿ, ಆಗ ನಿಮ್ಮ ಹೆಸರನ್ನು ಕರೆಯುವೆವು.
[19] ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.