Skip to content
Opens in a new window
Listen to this chapter • 1:46

[1] ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ.

[2] ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು.

[3] ದೇವರು ಅಲ್ಲಿಯೇ ಬಿಲ್ಲಿನ ಉರಿಬಾಣಗಳನ್ನೂ ಗುರಾಣಿಯನ್ನೂ ಖಡ್ಗವನ್ನೂ ಯುದ್ಧಾಯುಧಗಳನ್ನು ಮುರಿದುಬಿಟ್ಟರು.

[4] ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ.

[5] ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ.

[6] ಯಾಕೋಬನ ದೇವರೇ, ನಿಮ್ಮ ಗದರಿಕೆಯಿಂದ ರಥವೂ ಕುದುರೆಯೂ ಚಲನೆಯಿಲ್ಲದೆ ಬಿದ್ದಿವೆ.

[7] ನೀವು ಭಯಭಕ್ತಿಗೆ ಪಾತ್ರರು, ನೀವು ಒಂದು ಸಾರಿ ಬೇಸರಗೊಂಡರೆ, ನಿಮ್ಮ ಮುಂದೆ ನಿಲ್ಲುವವನ್ಯಾರು?

[8] ಪರಲೋಕದಿಂದ ನ್ಯಾಯ ನಿರ್ಣಯವನ್ನು ಮಾಡಿದ್ದೀರಿ. ದೇವರೇ, ನ್ಯಾಯತೀರಿಸುವುದಕ್ಕೂ

[9] ಭೂಮಿಯ ದೀನರೆಲ್ಲರನ್ನು ರಕ್ಷಿಸುವುದಕ್ಕೂ ನೀವು ಪ್ರಾರಂಭಿಸುವಾಗ ಭೂಮಿಯು ಭಯಗೊಂಡು ಮೌನವಾಯಿತು.

[10] ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.

[11] ನಿಮ್ಮ ದೇವರಾದ ಯೆಹೋವ ದೇವರಿಗೆ ಹರಕೆಮಾಡಿ ಸಲ್ಲಿಸಿರಿ. ದೇವರ ಸುತ್ತಲಿರುವವರೆಲ್ಲರು ಭಯಭಕ್ತಿಗೆ ಪಾತ್ರರಾದವರಿಗೆ ಕಾಣಿಕೆಗಳನ್ನು ತರಲಿ.

[12] ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.

ಕೀರ್ತನೆಗಳು — Chapters