Skip to content
Opens in a new window
Listen to this chapter • 2:11

[1] ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವುದು ಒಳ್ಳೆಯದು. ಮಹೋನ್ನತರೇ, ನಿಮ್ಮ ಹೆಸರನ್ನು ಕೀರ್ತಿಸುವುದು ಒಳ್ಳೆಯದು.

[2] ಬೆಳಿಗ್ಗೆ ನಿಮ್ಮ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ನಿಮ್ಮ ನಂಬಿಕೆಯನ್ನೂ ಸಾರುವುದು ಒಳ್ಳೆಯದು.

[3] ಹತ್ತು ತಂತಿವಾದ್ಯದಿಂದಲೂ ವೀಣೆಯಿಂದಲೂ ಕಿನ್ನರಿಯ ಘನಸ್ವರದಿಂದಲೂ ಬಾರಿಸುವುದು ಒಳ್ಳೆಯದು.

[4] ಯೆಹೋವ ದೇವರೇ, ನಿಮ್ಮ ಕ್ರಿಯೆಯಿಂದ ನನ್ನನ್ನು ಸಂತೋಷಪಡಿಸಿದ್ದೀರಿ. ನಿಮ್ಮ ಕೈಕೆಲಸಗಳಲ್ಲಿ ಜಯಧ್ವನಿಗೈಯುತ್ತೇನೆ.

[5] ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.

[6] ಇದನ್ನು ಬುದ್ಧಿಹೀನ ಮನುಷ್ಯನು ತಿಳಿದುಕೊಳ್ಳನು. ಮೂರ್ಖನು ಇದನ್ನು ಗ್ರಹಿಸನು.

[7] ದುಷ್ಟರು ಹುಲ್ಲಿನ ಹಾಗೆ ಚಿಗುರಿದರೂ ಅಕ್ರಮ ಮಾಡುವವರೆಲ್ಲರು ವೃದ್ಧಿ ಆದರೂ ಅವರು ನಿತ್ಯ ದಂಡನೆಗೆ ಗುರಿಯಾಗುವರು.

[8] ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.

[9] ನಿಜವಾಗಿಯೂ ನಿಮ್ಮ ಶತ್ರುಗಳು ಯೆಹೋವ ದೇವರೇ, ನಿಮ್ಮ ಶತ್ರುಗಳು ನಾಶವಾಗುವರು. ಕೇಡು ಮಾಡುವವರೆಲ್ಲರು ಚದರಿಹೋಗುವರು.

[10] ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.

[11] ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.

[12] ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.

[13] ಅವರು ಯೆಹೋವ ದೇವರ ಆಲಯದಲ್ಲಿ ನೆಟ್ಟ ಸಸಿಗಳಂತಿರುವರು. ನಮ್ಮ ದೇವರ ಅಂಗಳಗಳಲ್ಲಿ ಅವರು ವೃದ್ಧಿ ಆಗುವರು.

[14] ಮುದಿಪ್ರಾಯದಲ್ಲಿಯೂ ಫಲ ಕೊಡುವರು. ಅವರು ಹಸಿರಾಗಿ ಶೋಭಿಸುವರು.

[15] “ಯೆಹೋವ ದೇವರು ಯಥಾರ್ಥವಂತರೂ ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,” ಎಂದು ನೀತಿವಂತರು ಘೋಷಿಸುವರು.

ಕೀರ್ತನೆಗಳು — Chapters