Skip to content
Opens in a new window
Listen to this chapter • 9:52

[1] ನನ್ನ ಜನರೇ, ನನ್ನ ಬೋಧನೆಗೆ ಕಿವಿಗೊಡಿರಿ; ನನ್ನ ಬಾಯಿ ಮಾತುಗಳನ್ನು ಲಾಲಿಸಿರಿ.

[2] ನಾನು ಸಾಮ್ಯವನ್ನು ಹೇಳಲು ನನ್ನ ಬಾಯಿ ತೆರೆಯುವೆನು. ಪೂರ್ವದಿಂದಿರುವ ಗುಪ್ತವಾದವುಗಳನ್ನು ನುಡಿಯುವೆನು.

[3] ಅವುಗಳನ್ನು ನಾವು ಕೇಳಿ ತಿಳಿದಿದ್ದೇವೆ. ನಮ್ಮ ಪಿತೃಗಳು ನಮಗೆ ವಿವರಿಸಿದರು.

[4] ನಾವು ಸಹ ಯೆಹೋವ ದೇವರ ಸ್ತೋತ್ರಗಳನ್ನೂ ಅವರ ಶಕ್ತಿಯನ್ನೂ ದೇವರು ಮಾಡಿದ ಅದ್ಭುತಗಳನ್ನೂ ನಮ್ಮ ಮಕ್ಕಳಿಗೆ ವಿವರಿಸುವೆವು. ನಮ್ಮ ಮಕ್ಕಳು ಮುಂದಿನ ತಲೆಮಾರಿಗೆ ಮರೆಮಾಡದಿರುವರು.

[5] ಅವರು ಯಾಕೋಬ ವಂಶದಲ್ಲಿ ಶಾಸನಗಳನ್ನು ಸ್ಥಾಪಿಸಿ, ಇಸ್ರಾಯೇಲಿನಲ್ಲಿ ನಿಯಮವನ್ನು ಇಟ್ಟು, ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, ಅವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ,

[6] ಇದರಿಂದ ಮುಂದಿನ ತಲೆಮಾರಿಗೆ ವಾಕ್ಯವು ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.

[7] ಆಗ ಅವರು ದೇವರಲ್ಲಿ ತಮ್ಮ ಭರವಸೆ ಇಡುವರು. ಮತ್ತು ದೇವರ ಕ್ರಿಯೆಗಳನ್ನು ಮರೆತು ಬಿಡದೆ ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವರು.

[8] ಆಗ ಅವರು ತಮ್ಮ ಪಿತೃಗಳ ಹಾಗೆ ಹಟಮಾರಿ ಮತ್ತು ದಂಗೆಕೋರ ಸಂತತಿಯವರು ಆಗಿರುವುದಿಲ್ಲ, ಅವರ ಹೃದಯವು ದೇವರಿಗೆ ಸತ್ಯವಾಗಿರಲಿಲ್ಲ, ಅವರ ಆತ್ಮವು ದೇವರಲ್ಲಿ ನಂಬಿಗಸ್ತಿಕೆಯಿಂದಲೂ ಇರಲಿಲ್ಲ.

[9] ಎಫ್ರಾಯೀಮನ ಮಕ್ಕಳು ಆಯುಧಗಳನ್ನು ಧರಿಸಿ, ಬಿಲ್ಲುಗಳನ್ನು ಹೊತ್ತುಕೊಂಡಿದ್ದರೂ ಕಾಳಗದ ದಿವಸದಲ್ಲಿ ಹಿಂತಿರುಗಿಕೊಂಡರು.

[10] ಅವರು ದೇವರ ಒಡಂಬಡಿಕೆಯನ್ನು ಕೈಗೊಳ್ಳಲಿಲ್ಲ. ದೇವರ ನಿಯಮದಲ್ಲಿ ನಡೆಯಲೊಲ್ಲದೆ ಇದ್ದರು.

[11] ದೇವರು ಅವರಿಗೆ ತೋರಿಸಿದ ಕೃತ್ಯಗಳನ್ನೂ ದೇವರು ಮಾಡಿದ ಅದ್ಭುತಗಳನ್ನೂ ಮರೆತುಬಿಟ್ಟರು.

[12] ದೇವರು ಪಿತೃಗಳ ಮುಂದೆ ಈಜಿಪ್ಟ್ ದೇಶದಲ್ಲಿ, ಚೋವನ್ ಬೈಲಿನಲ್ಲಿ ಅದ್ಭುತಗಳನ್ನು ಮಾಡಿದರು.

[13] ದೇವರು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದರು. ನೀರನ್ನು ಗೋಡೆಯಾಗಿ ನಿಲ್ಲಿಸಿದರು.

[14] ದೇವರು ಹಗಲಿನಲ್ಲಿ ಮೇಘದಿಂದಲೂ ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡೆಸಿದರು.

[15] ಮರುಭೂಮಿಯಲ್ಲಿ ದೇವರು ಬಂಡೆಗಳನ್ನು ಸೀಳಿ, ಜನರಿಗೆ ಮಹಾ ಜಲಾಗಾಧಗಳ ಹಾಗೆ ನೀರನ್ನು ಕುಡಿಯಲು ಕೊಟ್ಟರು.

[16] ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು, ನದಿಗಳನ್ನು ನೀರನ್ನು ಹರಿಯಮಾಡಿದರು.

[17] ಆದರೆ ಜನರು ಇನ್ನೂ ದೇವರಿಗೆ ವಿರೋಧವಾಗಿ ಪಾಪಮಾಡಿ, ಮರುಭೂಮಿಯಲ್ಲಿ ಮಹೋನ್ನತರಿಗೆ ವಿರೋಧವಾಗಿ ಕೋಪವನ್ನೆಬ್ಬಿಸಿದರು.

[18] ದೇವರನ್ನು ತಮ್ಮ ಹೃದಯದಲ್ಲಿ ಬೇಕೆಂದು ಪರೀಕ್ಷಿಸಿ, ತಮ್ಮ ದುರಾಶೆಗಳಿಗೋಸ್ಕರ ಆಹಾರವನ್ನು ಕೇಳಿದರು.

[19] ಹೌದು, ಅವರು ದೇವರಿಗೆ ವಿರೋಧವಾಗಿ ಮಾತನಾಡಿ, “ದೇವರು ಅರಣ್ಯದಲ್ಲಿ ಭೋಜನವನ್ನು ಸಿದ್ಧ ಮಾಡಬಲ್ಲನೋ?

[20] ಇಗೋ, ದೇವರು ಬಂಡೆಯನ್ನು ಹೊಡೆಯಲಾಗಿ, ನೀರು ಚಿಮ್ಮಿ ಹೊರಟಿತು. ಹಳ್ಳಗಳು ದಡಮೀರಿ ಹರಿದವು. ಅರಣ್ಯದಲ್ಲಿ, ರೊಟ್ಟಿಯನ್ನು ಸಹ ಕೊಡಬಲ್ಲನೋ? ತಮ್ಮ ಜನರಿಗೆ ಮಾಂಸವನ್ನು ಸಿದ್ಧಮಾಡುವನೋ?” ಎಂದರು.

[21] ಯೆಹೋವ ದೇವರು ಇದನ್ನು ಕೇಳಿ ಬೇಸರಗೊಂಡರು. ಯಾಕೋಬ್ಯರಲ್ಲಿ ಬೆಂಕಿ ಹೊತ್ತಿತು. ಇಸ್ರಾಯೇಲರು ದಂಡನೆಗೆ ಒಳಗಾದರು.

[22] ಏಕೆಂದರೆ ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ. ದೇವರ ರಕ್ಷಣೆಯಲ್ಲಿ ಭರವಸೆ ಇಡಲಿಲ್ಲ.

[23] ಆದರೆ ದೇವರು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ, ಆಕಾಶದ ಕದಗಳನ್ನು ತೆರೆದರು.

[24] ಉಣ್ಣುವುದಕ್ಕೆ ಮನ್ನವನ್ನು ಜನರ ಮೇಲೆ ಸುರಿಸಿ, ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟರು.

[25] ದೇವದೂತರ ಆಹಾರವನ್ನು ಮಾನವರು ತಿಂದರು. ದೇವರು ಅವರಿಗೆ ಬೇಕಾದಷ್ಟು ಕಳುಹಿಸಿದರು.

[26] ಮೂಡಣ ಗಾಳಿಯನ್ನು ಆಕಾಶದಲ್ಲಿ ಹುಟ್ಟಿಸಿ, ತಮ್ಮ ಶಕ್ತಿಯಿಂದ ದಕ್ಷಿಣ ಗಾಳಿಯನ್ನು ಬರಮಾಡಿದರು.

[27] ಧೂಳಿನಂತೆ ಮಾಂಸವನ್ನು ಸುರಿಸಿದರು. ಸಮುದ್ರದ ಮರಳಿನಂತೆ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿದರು.

[28] ಅವರ ಮಧ್ಯದಲ್ಲಿಯೂ ಅವರ ಗುಡಾರಗಳ ಸುತ್ತಲೂ ಸುರಿಸಿದರು.

[29] ಆಗ ಅವರು ತಿಂದು ಬಹಳ ತೃಪ್ತಿಗೊಂಡರು. ಅವರು ಆಶಿಸಿದ್ದನ್ನು ದೇವರು ಕೊಟ್ಟರು.

[30] ಅವರು ತಮ್ಮ ಆಶೆಯನ್ನು ಬಿಡದೆ, ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ,

[31] ದೇವರ ಶಿಕ್ಷೆ ಅವರ ಮೇಲೆ ಬಿತ್ತು. ಅವರಲ್ಲಿ ಕೊಬ್ಬಿದವರು ಸತ್ತರು. ಇಸ್ರಾಯೇಲರ ಪ್ರಾಯಸ್ಥರು ಸಹ ಸತ್ತುಹೋದರು.

[32] ಇದೆಲ್ಲಾ ಆದಾಗ್ಯೂ ಜನರು ಇನ್ನೂ ಪಾಪಮಾಡುತ್ತಿದ್ದರು. ದೇವರ ಅದ್ಭುತಗಳನ್ನು ಕಂಡರೂ ನಂಬಲಿಲ್ಲ.

[33] ಆಗ ದೇವರು ಅವರ ದಿವಸಗಳನ್ನು ವ್ಯರ್ಥವಾಗಿಯೂ ಅವರ ವರ್ಷಗಳನ್ನು ಕಳವಳದಲ್ಲಿಯೂ ಕಳೆಯ ಹೋಗಲು ಅನುಮತಿಸಿದರು.

[34] ದೇವರು ಜನರನ್ನು ದಂಡಿಸುವಾಗೆಲ್ಲಾ ಅವರು ದೇವರನ್ನು ಹುಡುಕಿದರು. ಆಸಕ್ತಿಯಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು.

[35] ದೇವರು ತಮ್ಮ ಬಂಡೆ ಎಂದೂ ಮಹೋನ್ನತರಾದ ದೇವರು ತಮ್ಮ ವಿಮೋಚಕರೆಂದೂ ಜ್ಞಾಪಕ ಮಾಡಿಕೊಳ್ಳುತ್ತಿದ್ದರು.

[36] ಆದರೂ ಅವರು ತಮ್ಮ ಬಾಯಿಗಳಿಂದ ದೇವರಿಗೆ ಮುಖಸ್ತುತಿ ಮಾಡಿ, ತಮ್ಮ ನಾಲಿಗೆಯಿಂದ ದೇವರನ್ನು ಸುಳ್ಳಾಗಿ ಹೋಗಳುತ್ತಿದ್ದರು.

[37] ಅವರ ಹೃದಯವು ದೇವರ ಸಂಗಡ ಸ್ಥಿರವಾಗಿರಲಿಲ್ಲ. ಅವರು ದೇವರ ಒಡಂಬಡಿಕೆಯಲ್ಲಿ ನಂಬಿಗಸ್ತರಾಗಿರಲಿಲ್ಲ.

[38] ಆದಾಗ್ಯೂ ದೇವರು ಅವರನ್ನು ಕರುಣಿಸಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಬಿಟ್ಟುಬಿಟ್ಟರು. ಹೌದು, ಅನೇಕ ಸಾರಿ ದೇವರು ಕೋಪಿಸಿಕೊಳ್ಳದಿದ್ದರು, ತಮ್ಮ ಬೇಸರವನ್ನು ದೇವರು ಪ್ರಯೋಗಿಸಲಿಲ್ಲ.

[39] ಜನರು ಬರೀ ಮಾಂಸ ಮಾತ್ರದವರೂ ತಿರುಗಿಕೊಳ್ಳದೆ ಹೋಗುವ ಗಾಳಿಯೂ ಆಗಿದ್ದಾರೆಂದು ದೇವರು ಜ್ಞಾಪಕಮಾಡಿಕೊಂಡರು.

[40] ಎಷ್ಟೋ ಸಾರಿ ಜನರು ಮರುಭೂಮಿಯಲ್ಲಿ ದೇವರಿಗೆ ಬೇಸರಮಾಡಿದರು. ಕಾಡಿನಲ್ಲಿ ದೇವರನ್ನು ದುಃಖಪಡಿಸಿದರು.

[41] ಅವರು ತಿರುಗಿಬಿದ್ದು ದೇವರನ್ನು ಪರೀಕ್ಷಿಸಿದರು. ಇಸ್ರಾಯೇಲರ ಪರಿಶುದ್ಧರಿಗೆ ಬೇಸರಗೊಳಿಸಿದರು.

[42] ದೇವರು ಅವರನ್ನು ವೈರಿಯಿಂದ ವಿಮೋಚಿಸಿದ್ದನ್ನೂ ತಾವು ತೋರಿಸಿದ ಶಕ್ತಿಯನ್ನೂ ಅವರು ಸ್ಮರಿಸಲಿಲ್ಲ.

[43] ಈಜಿಪ್ಟಿನಲ್ಲಿ ಆದ ಸೂಚಕಕಾರ್ಯಗಳನ್ನೂ, ಚೋವನ್ ಬಯಲಿನಲ್ಲಿ ನಡೆಸಿದ ಅದ್ಭುತಗಳನ್ನು ಮಾಡಿದ ದಿವಸವನ್ನೂ ಅವರು ಜ್ಞಾಪಕ ಮಾಡಿಕೊಳ್ಳಲಿಲ್ಲ.

[44] ಅವರು ಕುಡಿಯಲಾರದ ಹಾಗೆ ಅವರ ನದಿಗಳು ರಕ್ತವಾದವು. ಅವರ ಹೊಳೆಗಳು ಸಹ ರಕ್ತವಾಗಿ ಮಾರ್ಪಟ್ಟವು.

[45] ಅವರಲ್ಲಿ ವಿವಿಧ ಹುಳುಗಳು ಬಂದವು. ಅವು ಅವರನ್ನು ಹಾನಿಮಾಡಿದವು. ಕಪ್ಪೆಗಳು ಸಹ ಕಳುಹಿಸಲಾದವು. ಅವು ಸಹ ಅವರನ್ನು ಹಾನಿಮಾಡಿದವು.

[46] ಅವರ ಬೆಳೆಗಳು ಕಂಬಳಿ ಹುಳುಗಳಿಗೂ ಅವರ ವ್ಯವಸಾಯ ಮಿಡತೆಗಳಿಗೂ ತುತ್ತಾದವು.

[47] ಅವರ ದ್ರಾಕ್ಷಿಬಳ್ಳಿಗಳು ಕಲ್ಮಳೆಯಿಂದಲೂ ಅವರ ಅತ್ತಿಮರಗಳು ಮಂಜಿನಿಂದಲೂ ನಾಶವಾದವು.

[48] ಅವರ ದನಗಳು ಕಲ್ಮಳೆಗೂ ಅವರ ಪಶುಗಳು ಸಿಡಿಲಿಗೂ ಒಳಪಟ್ಟವು.

[49] ದೇವರು ನಾಶದ ದೇವದೂತರನ್ನು ಕಳುಹಿಸುತ್ತಾ ತಮ್ಮ ಬೇಸರದಿಂದಲೂ ದುಃಖದಿಂದಲೂ ಇಕ್ಕಟ್ಟುಗಳನ್ನೂ ಅವರ ಮೇಲೆ ಸುರಿಯಮಾಡಿದರು.

[50] ತಮ್ಮ ಬೇಸರಕ್ಕೆ ದಾರಿಯನ್ನು ಮಾಡಿ, ಅವರನ್ನು ಪೂರ್ಣವಾಗಿ ದಂಡಿಸಿದರು. ಅವರ ಜೀವವನ್ನು ವ್ಯಾಧಿಗೆ ಒಪ್ಪಿಸಿಬಿಟ್ಟು,

[51] ಈಜಿಪ್ಟಿನಲ್ಲಿ ಚೊಚ್ಚಲರೆಲ್ಲರನ್ನೂ, ಹಾಮನ ಗುಡಾರಗಳಲ್ಲಿ ಪುರುಷತ್ವದ ಪ್ರಥಮ ಫಲವನ್ನೂ ದಂಡಿಸಿದರು.

[52] ಆದರೆ ದೇವರು ಮಂದೆಯ ಹಾಗೆ ತಮ್ಮ ಜನರನ್ನು ಹೊರತಂದು, ಕುರಿಗಳನ್ನು ನಡೆಸುವಂತೆ ಮರುಭೂಮಿಯಲ್ಲಿ ಅವರನ್ನು ನಡೆಸಿದರು.

[53] ಜನರನ್ನು ಸುರಕ್ಷಿತವಾಗಿ ನಡೆಸಿದ ಕಾರಣ ಅವರು ಹೆದರಲಿಲ್ಲ. ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.

[54] ಹೀಗೆ ದೇವರು ತಮ್ಮ ಭುಜಬಲದಿಂದ ಪವಿತ್ರ ನಾಡಿನ ತಮ್ಮ ಮೇರೆಗೂ, ಈ ಪರ್ವತ ನಾಡಿಗೂ ಅವರನ್ನು ಬರಮಾಡಿದರು.

[55] ದೇವರು ಜನಾಂಗಗಳನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲರನ್ನು ವಾಸಿಸುವಂತೆ ಮಾಡಿದರು.

[56] ಆದರೆ ಜನರು ಮಹೋನ್ನತರಾದ ದೇವರನ್ನು ಪರೀಕ್ಷಿಸಿ ವಿರೋಧಿಸಿದರು; ದೇವರ ಶಾಸನಗಳನ್ನು ಅವರು ಕೈಗೊಳ್ಳಲಿಲ್ಲ.

[57] ತಮ್ಮ ಪಿತೃಗಳ ಹಾಗೆ ಉಪಕಾರ ನೆನಸದೆ, ಅಪನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ಓರೆಯಾದರು.

[58] ತಮ್ಮ ಉನ್ನತ ಸ್ಥಳಗಳಿಂದ ದೇವರಿಗೆ ಬೇಸರಗೊಳಿಸಿದರು. ತಮ್ಮ ಮೂರ್ತಿಗಳಿಂದ ದೇವರಿಗೆ ದುಃಖಪಡಿಸಿದರು.

[59] ದೇವರು ಇದನ್ನು ಕಂಡಾಗ, ಬೇಸರಗೊಂಡು ಇಸ್ರಾಯೇಲನ್ನು ಪರಿಪೂರ್ಣವಾಗಿ ತಿರಸ್ಕರಿಸಿಬಿಟ್ಟರು.

[60] ದೇವರು ಸಿಲೋವಿನ ಗುಡಾರನ್ನೂ ಜನರೊಳಗೆ ಹಾಕಿದ ಗುಡಾರವನ್ನೂ ತಳ್ಳಿಬಿಟ್ಟರು.

[61] ತಮ್ಮ ಬಲದ ಮಂಜೂಷವನ್ನು ಸೆರೆಗೆ ಒಪ್ಪಿಸಿಬಿಟ್ಟರು. ತಮ್ಮ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟರು.

[62] ದೇವರು ತಮ್ಮ ಜನರನ್ನು ಖಡ್ಗಕ್ಕೆ ಒಪ್ಪಿಸಿಕೊಟ್ಟರು. ತಮ್ಮ ಸ್ವಾಸ್ಥತೆಗೆ ವಿರೋಧವಾಗಿದ್ದರು.

[63] ಅವರ ಯುವಕರನ್ನು ಬೆಂಕಿಯು ದಹಿಸಿಬಿಟ್ಟಿತು. ಅವರ ಕನ್ಯೆಯರು ವಿವಾಹ ಗೀತೆಗಳನ್ನು ಹಾಡಲಿಲ್ಲ.

[64] ಅವರ ಯಾಜಕರು ಖಡ್ಗದಿಂದ ಸಂಹಾರವಾದರು. ಅವರ ವಿಧವೆಯರು ಗೋಳಾಡಲಿಲ್ಲ.

[65] ಆಗ ಯೆಹೋವ ದೇವರು ಪ್ರತಿಕ್ರಿಯೆಯನ್ನು ಪ್ರಕಟಿಸಿದರು. ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆ ಸಂರಕ್ಷಿಸಲಾದರು.

[66] ತಮ್ಮ ವೈರಿಗಳನ್ನು ದಂಡಿಸಿದರು. ನಿತ್ಯನಿಂದೆಯೇ ಅವರ ಪಾಲಾಯಿತು.

[67] ಆಗ ದೇವರು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯೀಮನ ಗೋತ್ರವನ್ನು ಆಯ್ದುಕೊಳ್ಳದೆ,

[68] ಯೆಹೂದನ ಕುಲವನ್ನೂ, ತಾನು ಪ್ರೀತಿಮಾಡಿದ ಚೀಯೋನ್ ಪರ್ವತವನ್ನೂ ಆಯ್ದುಕೊಂಡರು.

[69] ಉನ್ನತವಾದವುಗಳಂತೆಯೂ, ಯುಗಯುಗಕ್ಕೂ ತಾವು ಅಸ್ತಿವಾರ ಹಾಕಿದ ಭೂಮಿಯಂತೆಯೂ ತಮ್ಮ ಪರಿಶುದ್ಧ ಸ್ಥಳವನ್ನು ಕಟ್ಟಿದರು.

[70] ತಮ್ಮ ಸೇವಕ ದಾವೀದನನ್ನು ಆಯ್ದುಕೊಂಡು, ಕುರಿಹಟ್ಟಿಯಿಂದ ಅವನನ್ನು ತೆಗೆದುಕೊಂಡರು.

[71] ತಮ್ಮ ಪ್ರಜೆಯಾದ ಯಾಕೋಬ್ಯರನ್ನೂ ತಮ್ಮ ಬಾಧ್ಯತೆಯಾದ ಇಸ್ರಾಯೇಲರನ್ನೂ ಮೇಯಿಸುವ ಕುರುಬನನ್ನಾಗಿ ದಾವೀದನನ್ನು ನೇಮಿಸಿದರು.

[72] ದಾವೀದನು ತಮ್ಮ ಹೃದಯದ ಯಥಾರ್ಥತೆಯ ಪ್ರಕಾರ ಜನರನ್ನು ಪೋಷಿಸಿ ತಮ್ಮ ಹಸ್ತ ಕೌಶಲ್ಯದಿಂದ ಅವರನ್ನು ನಡೆಸಿದನು.

ಕೀರ್ತನೆಗಳು — Chapters