[1] ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ, ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ; ನಾನು ಯೆಹೋವ ದೇವರಲ್ಲಿ ಕದಲದೆ ಭರವಸೆ ಇಟ್ಟಿದ್ದೇನೆ.
[2] ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ; ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ.
[3] ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ; ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ.
[4] ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ; ವಂಚಕರ ಸಂಗಡ ನಾನು ಹೋಗುವುದಿಲ್ಲ.
[5] ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ; ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ.
[6] ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,
[7] ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು.
[8] ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.
[9] ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ, ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ.
[10] ಅವರ ಕೈಗಳಲ್ಲಿ ಕೇಡು ಇದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
[11] ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ; ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ.
[12] ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ; ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.