[1] ಬಾಬಿಲೋನಿನ ನದಿಗಳ ಹತ್ತಿರ ನಾವು ಕುಳಿತುಕೊಂಡು, ಚೀಯೋನನ್ನು ಜ್ಞಾಪಕ ಮಾಡಿಕೊಂಡಾಗ ಅತ್ತೆವು.
[2] ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗು ಹಾಕಿದೆವು.
[3] ಏಕೆಂದರೆ ಅಲ್ಲಿ ನಮ್ಮನ್ನು ಸೆರೆಹಿಡಿದು ಬಂಧಿಸಿದವರು, ನಮಗೆ ಹಾಡನ್ನು ಹಾಡಲು ಹೇಳಿದ್ದರು; ನಮ್ಮನ್ನು ಪೀಡಿಸುವವರು ವಿನೋದಕ್ಕಾಗಿ ಹಾಡನ್ನು ಕೇಳಲು ಬಯಸಿದ್ದರು; “ಚೀಯೋನಿನ ಹಾಡುಗಳಲ್ಲಿ ಒಂದು ನಮಗೆ ಹಾಡಿರಿ,” ಎಂದರು.
[4] ಅನ್ಯದೇಶದಲ್ಲಿ ನಾವು ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ?
[5] ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ, ನನ್ನ ಬಲಗೈಯ ಕೌಶಲ್ಯ ಮರೆತು ಹೋಗಲಿ.
[6] ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದಿದ್ದರೆ, ಯೆರೂಸಲೇಮನ್ನು ನನ್ನ ಎಲ್ಲಾ ಸಂತೋಷಕ್ಕಿಂತಲೂ ಹೆಚ್ಚಾಗಿಡದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.
[7] ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ, “ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,” ಎಂದು ಹೇಳಿದ ಎದೋಮಿನವರನ್ನು ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ.
[8] ಹಾಳಾಗಲಿಕ್ಕಿರುವ ಬಾಬಿಲೋನ್ ನಗರವೇ, ನೀನು ನಮಗೆ ಮಾಡಿದ್ದಕ್ಕೆ ಪ್ರತೀಕಾರವನ್ನು ನಿನಗೆ ಸಲ್ಲಿಸುವವನು ಧನ್ಯನು.
[9] ನಿಮ್ಮ ಚಿಕ್ಕ ಕೂಸುಗಳನ್ನು ಹಿಡಿದು, ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.