Skip to content
Opens in a new window
Listen to this chapter • 2:44

[1] ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ. ದೇವರು ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ.

[2] ಅವರು ನನ್ನನ್ನು ಪ್ರೀತಿಸುವ ದೇವರು, ಅವರು ನನ್ನ ಕೋಟೆಯೂ, ನನ್ನ ಬಲವಾದ ಆಶ್ರಯವೂ, ನನ್ನನ್ನು ತಪ್ಪಿಸುವವರೂ, ನನ್ನ ಭರವಸೆಯೂ, ನನ್ನ ಗುರಾಣಿಯೂ, ಜನಾಂಗಗಳನ್ನು ನನಗೆ ವಶಮಾಡುವವರೂ ಆಗಿದ್ದಾರೆ.

[3] ಯೆಹೋವ ದೇವರೇ, ನೀವು ಮಾನವನನ್ನು ಲಕ್ಷವಿಡುವ ಹಾಗೆ ಅವನು ಎಷ್ಟರವನು? ನೀವು ಅವನನ್ನು ನೆನಸುವ ಹಾಗೆ ಮಾನವನು ಎಷ್ಟರವನು?

[4] ಮನುಷ್ಯನು ಕೇವಲ ಉಸಿರಿನಂತಿದ್ದಾನೆ; ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ.

[5] ಯೆಹೋವ ದೇವರೇ, ನಿಮ್ಮ ಆಕಾಶಗಳನ್ನು ಒಡೆದು ಇಳಿದು ಬನ್ನಿರಿ; ಬೆಟ್ಟಗಳನ್ನು ಮುಟ್ಟಿರಿ, ಆಗ ಅವುಗಳಿಂದ ಹೊಗೆ ಹೊರಹೊಮ್ಮುವುದು.

[6] ಮಿಂಚಿನಿಂದ ವೈರಿಗಳನ್ನು ಚದರಿಸಿರಿ. ನಿಮ್ಮ ಬಾಣಗಳನ್ನು ಎಸೆದು, ಅವರನ್ನು ದಂಡಿಸಿರಿ.

[7] ನಿಮ್ಮ ಕೈಯನ್ನು ಉನ್ನತದಿಂದ ಚಾಚಿ, ಮಹಾ ಜಲದಿಂದಲೂ, ಪರದೇಶದವರ ಕೈಯಿಂದಲೂ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ.

[8] ಅವರ ಬಾಯಿ ಸುಳ್ಳನ್ನು ನುಡಿಯುತ್ತಿದೆ, ಅವರ ಬಲಗೈ ಮೋಸದ ಬಲಗೈ ಆಗಿದೆ.

[9] ಓ ದೇವರೇ, ನಾನು ಹೊಸಹಾಡನ್ನು ನಿಮಗೆ ಹಾಡುವೆನು; ಹತ್ತು ತಂತಿಗಳ ವಾದ್ಯದಿಂದ ನಿಮ್ಮನ್ನು ಕೀರ್ತಿಸುವೆನು.

[10] ಅರಸರಿಗೆ ಜಯವನ್ನು ಕೊಡುವ ದೇವರೇ, ನಿಮ್ಮ ಸೇವಕನಾದ ದಾವೀದನನ್ನೂ ಭಯಂಕರ ಖಡ್ಗದಿಂದ ಬಿಡಿಸಿದ್ದೀರಿ.

[11] ಪರದೇಶದವರ ಕೈಯಿಂದ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ; ಅವರ ಬಾಯಿ ವಂಚನೆಯನ್ನು ನುಡಿಯುತ್ತಿದೆ. ಅವರ ಬಾಯಿ ಸುಳ್ಳನ್ನೇ ನುಡಿಯುತ್ತಿದೆ.

[12] ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ಯೌವನದಲ್ಲಿ ಉತ್ತಮವಾಗಿ ಬೆಳೆದವರಾಗಿರಲಿ; ನಮ್ಮ ಹೆಣ್ಣುಮಕ್ಕಳು ಅರಮನೆಯ ಶೃಂಗಾರಕ್ಕಾಗಿ ಕೆತ್ತಿದ ಸುಂದರ ಸ್ತಂಭಗಳ ಹಾಗಿರಲಿ.

[13] ನಮ್ಮ ಉಗ್ರಾಣಗಳು ನಾನಾ ವಿಧವಾದ ಧಾನ್ಯಗಳನ್ನು ತುಂಬಿರಲಿ. ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಹೊಲಗಳಲ್ಲಿ ಹತ್ತು ಸಹಸ್ರವಾಗಿ ಹೆಚ್ಚಲಿ.

[14] ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ; ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ. ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.

[15] ಹೀಗಿರುವ ಜನರು ಧನ್ಯರು; ಯೆಹೋವ ದೇವರು ಯಾರಿಗೆ ದೇವರಾಗಿದ್ದಾರೋ, ಅವರು ಧನ್ಯರು.

ಕೀರ್ತನೆಗಳು — Chapters