[1] ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
[2] ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ, ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?
[3] ನ್ಯಾಯವನ್ನು ಕಾಪಾಡಿಕೊಂಡು ಯಾವಾಗಲೂ ಸರಿಯಾದವುಗಳನ್ನು ಪಾಲಿಸುವವರು ಧನ್ಯರು.
[4] ದೇವರೇ, ನಿಮ್ಮ ಜನರ ಮೇಲಿರುವ ಮೆಚ್ಚುಗೆಯಿಂದ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ, ನಿಮ್ಮ ರಕ್ಷಣೆಯಿಂದ ನನ್ನನ್ನು ದರ್ಶಿಸಿರಿ.
[5] ಯೆಹೋವ ದೇವರೇ, ನಾನು ನೀವು ಆಯ್ದುಕೊಂಡವರ ಸುಖವನ್ನು ಕಂಡು, ನಿಮ್ಮ ಜನರ ಸಂತೋಷದೊಂದಿಗೆ ಸಂತೋಷಿಸಿ, ನಿಮ್ಮ ಸ್ವಕೀಯರ ಸಂಗಡ ಹೊಗಳಿಕೊಳ್ಳುವೆನು.
[6] ನಮ್ಮ ಪಿತೃಗಳಂತೆ ನಾವು ಕೂಡಾ ಪಾಪಮಾಡಿದ್ದೇವೆ; ಅಕ್ರಮ ಮಾಡಿದ್ದೇವೆ; ದುಷ್ಟಕೃತ್ಯಗಳನ್ನು ನಡೆಸಿದ್ದೇವೆ.
[7] ನಮ್ಮ ಪಿತೃಗಳು ಈಜಿಪ್ಟಿನಲ್ಲಿ ನಿಮ್ಮ ಅದ್ಭುತಗಳಿಗೆ ಲಕ್ಷಕೊಡದೆ, ನಿಮ್ಮ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ ಅಂದರೆ ಕೆಂಪುಸಮುದ್ರದ ಹತ್ತಿರ ತಿರುಗಿಬಿದ್ದರು.
[8] ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ, ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.
[9] ದೇವರು ಕೆಂಪು ಸಮುದ್ರವನ್ನು ಗದರಿಸಲು, ಅದು ಒಣಗಿ ಹೋಯಿತು; ಹೀಗೆ ಮರುಭೂಮಿಯಲ್ಲಿ ನಡೆದು ಹೋದಂತೆ ಜಲಾಗಾಧದಲ್ಲಿ ಇಸ್ರಾಯೇಲರನ್ನು ನಡೆಸಿದರು.
[10] ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿದರು, ಶತ್ರುವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದರು.
[11] ಪ್ರವಾಹಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು, ವೈರಿಗಳಲ್ಲಿ ಒಬ್ಬನೂ ಉಳಿಯಲಿಲ್ಲ.
[12] ಆಗ ಅವರು ದೇವರ ಮಾತುಗಳನ್ನು ನಂಬಿ, ದೇವರಿಗೆ ಸ್ತೋತ್ರವನ್ನು ಹಾಡಿದರು.
[13] ಆದರೆ ಬೇಗನೇ ದೇವರು ಮಾಡಿದ ಕೆಲಸಗಳನ್ನು ಮರೆತುಬಿಟ್ಟು, ದೇವರ ಸಂಕಲ್ಪಕ್ಕೆ ಅವರು ಕಾದುಕೊಳ್ಳದೆ ಹೋದರು.
[14] ಮರುಭೂಮಿಯಲ್ಲಿ ದುರಾಶೆಯಿಂದ ಆಶಿಸಿ, ಹಾಳು ಪ್ರದೇಶದಲ್ಲಿ ದೇವರನ್ನು ಪರೀಕ್ಷಿಸಿದರು.
[15] ಆಗ ದೇವರು ಅವರ ಬೇಡಿಕೆಯಂತೆಯೇ ಅವರಿಗೆ ಕೊಟ್ಟುಬಿಟ್ಟರು; ಆದರೆ ಅವರ ದೇಹಕ್ಕೆ ಭೀಕರ ರೋಗವನ್ನು ಸಹ ಅನುಮತಿಸಿದರು.
[16] ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
[17] ಆಗ ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ, ಅಬೀರಾಮನ ಗುಂಪನ್ನು ಮುಚ್ಚಿಬಿಟ್ಟಿತು.
[18] ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
[19] ಅವರು ಹೋರೇಬಿನಲ್ಲಿ ಎರಕದ ಕರುವನ್ನು ಮಾಡಿ, ಆ ವಿಗ್ರಹಕ್ಕೆ ಅಡ್ಡಬಿದ್ದರು.
[20] ಹೀಗೆ ಅವರು ತಮ್ಮ ಮಹಿಮೆಯುಳ್ಳ ದೇವರನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
[21] ಅವರು ತಮ್ಮನ್ನು ರಕ್ಷಿಸಿದ ದೇವರನ್ನು ಬೇಗ ಮರೆತುಬಿಟ್ಟರು. ಹೌದು, ಈಜಿಪ್ಟ್ ದೇಶದಲ್ಲಿ ಮಹತ್ಕಾರ್ಯಗಳನ್ನೂ,
[22] ಹಾಮ ದೇಶದಲ್ಲಿ ಅದ್ಭುತಗಳನ್ನೂ, ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.
[23] ಆದ್ದರಿಂದ ದೇವರು ಅವರಿಗೆ ಪೂರ್ಣದಂಡನೆ ಕೊಡುವುದಾಗಿ ಹೇಳಿದರು. ಆದರೆ ಅವರು ಆಯ್ದುಕೊಂಡ ಮೋಶೆಯು, ದೇವರ ಕಠಿಣ ತೀರ್ಮಾನವನ್ನು ಶಾಂತಪಡಿಸಲು ಆಪತ್ತಿನಲ್ಲಿ ದೇವರ ಮುಂದೆ ಮಧ್ಯಸ್ಥನಾಗಿ ನಿಂತುಕೊಂಡನು.
[24] ಹೌದು, ಇಸ್ರಾಯೇಲರು ಮನೋಹರವಾದ ದೇಶವನ್ನು ಹೀನೈಸಿ, ದೇವರ ಮಾತನ್ನು ನಂಬದೆ ಹೋದರು.
[25] ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ ಯೆಹೋವ ದೇವರ ಮಾತನ್ನು ಹೇಳದೆ ಹೋದರು.
[26] ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ, ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ
[27] ತಮ್ಮ ಕೈಯನ್ನು ಎತ್ತಿ ಅವರಿಗೆ ಪ್ರಮಾಣ ಮಾಡಬೇಕಾಯಿತು.
[28] ಇಸ್ರಾಯೇಲರು ಬಾಳ್ ಪೆಯೋರನ ದೇವತೆಗೆ ತಮ್ಮನ್ನು ಒಪ್ಪಿಸಿಕೊಟ್ಟರು; ಜೀವವಿಲ್ಲದ ದೇವರುಗಳಿಗೆ ಅರ್ಪಿಸಿದ ಯಜ್ಞಗಳನ್ನು ತಿಂದರು.
[29] ತಮ್ಮ ಕ್ರಿಯೆಗಳಿಂದ ದೇವರನ್ನು ಅಸಂತೋಷಪಡಿಸಿದರು. ಆದ್ದರಿಂದ ವ್ಯಾಧಿಯು ಅವರಲ್ಲಿ ಹಬ್ಬಿತು.
[30] ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ ವ್ಯಾಧಿ ನಿಂತುಹೋಯಿತು.
[31] ಇದು ತಲತಲಾಂತರಕ್ಕೂ, ಯುಗಯುಗಕ್ಕೂ ಫೀನೆಹಾಸನಿಗೆ ನೀತಿ ಎಂದು ಎಣಿಸಲಾಯಿತು.
[32] ಮೆರೀಬಾದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಅಲ್ಲಿ ಅವರ ನಿಮಿತ್ತ ಮೋಶೆಗೆ ಕೇಡು ಬಂತು.
[33] ಏಕೆಂದರೆ ಇಸ್ರಾಯೇಲರು ದೇವರ ಆತ್ಮನಿಗೆ ತಿರುಗಿ ಬಿದ್ದದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
[34] ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ ಜನಗಳನ್ನು ಅವರು ದಂಡಿಸದೆ ಹೋದರು.
[35] ಆದರೆ ಇತರ ಜನಾಂಗಗಳ ಸಂಗಡ ಕೂಡಿಕೊಂಡು, ಅವರ ಪದ್ಧತಿಗಳನ್ನು ಕಲಿತುಕೊಂಡರು.
[36] ಅವರ ವಿಗ್ರಹಗಳಿಗೆ ಆರಾಧನೆ ಮಾಡಿದರು; ಅವು ಅವರಿಗೆ ಉರುಲಿನಂತಾದವು.
[37] ತಮ್ಮ ಗಂಡು ಮಕ್ಕಳನ್ನೂ, ಹೆಣ್ಣು ಮಕ್ಕಳನ್ನೂ ಸುಳ್ಳು ದೇವರುಗಳಿಗೆ ಬಲಿಕೊಟ್ಟರು.
[38] ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ, ದೇಶವನ್ನು ರಕ್ತದಿಂದ ಅಶುದ್ಧ ಮಾಡಿದರು.
[39] ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.
[40] ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು. ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,
[41] ಅವರನ್ನು ಇತರ ಜನಾಂಗಗಳ ಕೈಗೆ ಒಪ್ಪಿಸಿಕೊಟ್ಟರು. ಹೀಗೆ ಅವರ ವೈರಿಗಳು ಅವರನ್ನು ಆಳಿದರು.
[42] ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅವರು ಅಧೀನರಾದರು.
[43] ಅನೇಕ ಸಾರಿ ದೇವರು ಇಸ್ರಾಯೇಲರನ್ನು ಬಿಡಿಸಿದರು, ಆದರೆ ಅವರು ತಿರುಗಿಬೀಳುತ್ತಲೇ ಇದ್ದರು; ತಮ್ಮ ಅಕ್ರಮದಿಂದಲೇ ಅವರು ಕುಗ್ಗಿಹೋದರು;
[44] ಆದರೂ ಅವರ ಕೂಗನ್ನು ದೇವರು ಕೇಳಿದಾಗ ಇಕ್ಕಟ್ಟಿನಲ್ಲಿದ್ದ ಅವರ ಮೇಲೆ ಲಕ್ಷ್ಯವಿಟ್ಟು,
[45] ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,
[46] ಅವರನ್ನು ಸೆರೆಹಿಡಿದವರ ಕರುಣೆ ತೋರುವಂತೆ ಮಾಡಿದರು.
[47] ನಮ್ಮ ದೇವರಾದ ಯೆಹೋವ ದೇವರೇ, ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ, ನಮ್ಮನ್ನು ರಕ್ಷಿಸಿರಿ.
[48] ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲರೂ, “ಆಮೆನ್!” ಎಂದು ಹೇಳಲಿ. ನೀವು ಯೆಹೋವ ದೇವರನ್ನು ಸ್ತುತಿಸಿರಿ.