[1] ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿಕೊಂಡಿದ್ದೇನೆ; ನಾನು ಎಂದಿಗೂ ನಾಚಿಕೆಪಡದಂತೆ ಮಾಡಿರಿ; ನಿಮ್ಮ ನೀತಿಯಲ್ಲಿ ನನ್ನನ್ನು ವಿಮೋಚಿಸಿರಿ.
[2] ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ; ಬೇಗ ಬಂದು ನನ್ನನ್ನು ಬಿಡಿಸಿರಿ; ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ, ಬಲವಾದ ಕೋಟೆಯೂ ಆಗಿರಿ.
[3] ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ; ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ನಡೆಸಿರಿ; ನನಗೆ ಮಾರ್ಗದರ್ಶಕರಾಗಿರಿ.
[4] ವೈರಿಯು ಗುಪ್ತವಾಗಿ ಒಡ್ಡಿದ ಬಲೆಯೊಳಗಿಂದ ನನ್ನನ್ನು ಹೊರಗೆ ಎಳೆಯಿರಿ; ನೀವೇ ನನಗೆ ಆಶ್ರಯ.
[5] ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ; ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.
[6] ದೇವರಲ್ಲದವುಗಳನ್ನು ಅನುಸರಿಸುವವರಿಂದ ನಾನು ಪ್ರತ್ಯೇಕವಾಗಿದ್ದೇನೆ; ನಾನು ಯೆಹೋವ ದೇವರಲ್ಲಿಯೇ ಭರವಸೆ ಇಟ್ಟಿದ್ದೇನೆ.
[7] ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು; ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು, ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.
[8] ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ; ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.
[9] ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಇಕ್ಕಟ್ಟಿನಲ್ಲಿದ್ದೇನೆ; ನನ್ನ ಕಣ್ಣೂ ನನ್ನ ಪ್ರಾಣವೂ ನನ್ನ ದೇಹವೂ ದುಃಖದಿಂದ ಕ್ಷೀಣವಾಗಿವೆ.
[10] ನನ್ನ ಜೀವವು ಚಿಂತೆಯಿಂದಲೂ, ನನ್ನ ವರ್ಷಗಳು ನಿಟ್ಟುಸಿರಿನಿಂದಲೂ ಕಳೆದುಹೋಗಿವೆ; ನನ್ನ ಅಪರಾಧದಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಕ್ಷೀಣವಾಗಿವೆ.
[11] ನನ್ನ ವೈರಿಗಳೆಲ್ಲರ ನಿಮಿತ್ತವಾಗಿ ನನ್ನ ನೆರೆಯವರಿಗೆ ನಾನು ನಿಂದೆಯೂ, ಮಿತ್ರರಿಗೆ ಹೆದರಿಕೆಯೂ ಆಗಿದ್ದೇನೆ; ದಾರಿಯಲ್ಲಿ ನನ್ನನ್ನು ಕಂಡವರು ನನ್ನನ್ನು ಬಿಟ್ಟು ಓಡಿಹೋಗುತ್ತಾರೆ.
[12] ನಾನು ಸತ್ತುಹೋದವರಂತೆ ಎಲ್ಲರು ನನ್ನನ್ನು ಮರೆತುಬಿಟ್ಟಿದ್ದಾರೆ; ನಾನು ಒಡೆದ ಮಡಕೆಯಂತೆ ಇದ್ದೇನೆ.
[13] ಅನೇಕರು ಹೀಗೆ ಪಿಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತಲೂ ಅಂಜಿಕೆ ಇದೆ; ಅನೇಕರು ನನ್ನ ಪ್ರಾಣವನ್ನು ತೆಗೆಯಬೇಕೆಂದು ಒಳಸಂಚು ಮಾಡುತ್ತಿದ್ದಾರೆ.
[14] ಯೆಹೋವ ದೇವರೇ, ನಾನು ನಿಮ್ಮಲ್ಲಿ ಭರವಸೆ ಇಟ್ಟಿದ್ದೇನೆ; “ನನ್ನ ದೇವರು ನೀವೇ,” ಎಂದು ಹೇಳಿಕೊಂಡಿದ್ದೇನೆ.
[15] ನನ್ನ ಸಮಯವು ನಿಮ್ಮ ಕೈಯಲ್ಲಿ ಇವೆ; ನನ್ನ ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸಿರಿ.
[16] ನಿಮ್ಮ ಮುಖವು ನಿಮ್ಮ ಸೇವಕನ ಮೇಲೆ ಪ್ರಕಾಶಿಸಲಿ; ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನನ್ನು ರಕ್ಷಿಸಿರಿ.
[17] ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ.
[18] ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ, ಕಠಿಣವಾಗಿಯೂ ಮಾತನಾಡುವ ಸುಳ್ಳಿನ ತುಟಿಗಳು ಮೌನವಾಗಲಿ.
[19] ನಿಮ್ಮ ಒಳ್ಳೆಯತನವು ಎಷ್ಟೋ ಸಮೃದ್ಧ; ನೀವು ನಿಮಗೆ ಭಯಪಡುವವರಿಗೋಸ್ಕರ ಆ ಒಳ್ಳೆಯತನವನ್ನಿಟ್ಟಿದ್ದೀರಿ, ನಿಮ್ಮನ್ನು ಆಶ್ರಯಿಸಿಕೊಳ್ಳುವವರಿಗೆ ನೀವು ನಿಮ್ಮ ಒಳ್ಳೆಯತನವನ್ನು ಎಲ್ಲರ ಮುಂದೆ ದಯಪಾಲಿಸಿದ್ದೀರಿ.
[20] ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ನೀವು ಅವರನ್ನು ನಿಮ್ಮ ಸಾನಿಧ್ಯದಲ್ಲಿಯೇ ಮರೆಮಾಡುತ್ತೀರಿ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ನಿಮ್ಮ ನಿವಾಸದಲ್ಲಿ ಅಡಗಿಸುತ್ತೀರಿ.
[21] ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಮುತ್ತಿಗೆ ಹಾಕಲಾದ ನಗರದಲ್ಲಿದ್ದ ನನಗೆ ದೇವರು ಆಶ್ಚರ್ಯಕರವಾದ ಒಡಂಬಡಿಕೆಯ ಪ್ರೀತಿಯನ್ನು ತೋರಿಸಿದ್ದಾರೆ.
[22] “ನಾನು ನಿಮ್ಮ ಕಣ್ಣುಗಳ ಎದುರಿನಿಂದ ತೆಗೆದು ಹಾಕಲಾಗಿದ್ದೇನೆ” ಎಂದು ನನ್ನ ಗಾಬರಿಯಲ್ಲಿ ಹೇಳಿದೆನು; ಆದರೂ ನಾನು ಸಹಾಯಕ್ಕಾಗಿ ನಿಮಗೆ ಮೊರೆಯಿಡಲು ನೀವು ಕರುಣೆಗಾಗಿ ಕೂಗಿದ್ದನ್ನು ಕೇಳಿದ್ದೀರಿ.
[23] ಭಕ್ತರೇ, ಯೆಹೋವ ದೇವರನ್ನು ಪ್ರೀತಿಸಿರಿ; ಯೆಹೋವ ದೇವರು ನಂಬಿಗಸ್ತರನ್ನು ಕಾಯುತ್ತಾರೆ; ಅಹಂಕಾರಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.
[24] ಯೆಹೋವ ದೇವರಲ್ಲಿ ನಿರೀಕ್ಷಿಸುವವರೆಲ್ಲರೂ ದೃಢವಾಗಿರಿ; ನಿಮ್ಮ ಹೃದಯವು ಧೈರ್ಯದಿಂದ ಇರಲಿ.