[1] ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ; ಮನನೊಂದು ನನ್ನನ್ನು ಶಿಕ್ಷಿಸಬೇಡಿರಿ.
[2] ಏಕೆಂದರೆ, ನಿಮ್ಮ ಬಾಣಗಳು ನನ್ನಲ್ಲಿ ನಾಟಿವೆ. ನಿಮ್ಮ ಶಿಕ್ಷಾ ಹಸ್ತವು ನನ್ನ ಮೇಲೆ ಭಾರವಾಗಿದೆ.
[3] ನಿಮ್ಮ ಬೇಸರದ ನಿಮಿತ್ತ ನನ್ನ ಶರೀರದಲ್ಲಿ ಸ್ವಸ್ಥತೆ ಏನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಕ್ಷೇಮವೇ ಇಲ್ಲ.
[4] ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ; ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ.
[5] ನನ್ನ ಮೂರ್ಖತನದ ನಿಮಿತ್ತ ನನಗಾದ ಗಾಯಗಳು ದುರ್ವಾಸನೆಯಿಂದ ಕೀವು ತುಂಬಿವೆ.
[6] ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ. ದಿನವೆಲ್ಲಾ ದುಃಖದಿಂದ ನಾನು ಅಲೆಯುತ್ತಿದ್ದೇನೆ.
[7] ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ. ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ.
[8] ಬಲಹೀನನಾಗಿದ್ದೇನೆ, ಬಹಳ ಜಜ್ಜಿ ಹೋಗಿದ್ದೇನೆ; ನನ್ನ ಹೃದಯದ ವೇದನೆಯಿಂದ ನರಳುತ್ತಾ ಇದ್ದೇನೆ.
[9] ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ; ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ.
[10] ನನ್ನ ಹೃದಯ ಬಡಿದುಕೊಳ್ಳುತ್ತದೆ. ನನ್ನ ಶಕ್ತಿಯು ನನ್ನನ್ನು ಬಿಟ್ಟುಹೋಗಿದೆ; ನನ್ನ ಕಣ್ಣುಗಳ ಬೆಳಕು ಸಹ ಹೋಗಿಬಿಟ್ಟಿದೆ.
[11] ನನ್ನ ಪ್ರಿಯರೂ, ನನ್ನ ಸ್ನೇಹಿತರೂ ನನ್ನ ಬಾಧೆಗೆ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.
[12] ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಆಲೋಚಿಸುತ್ತಾರೆ.
[13] ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳುವುದಿಲ್ಲ; ತನ್ನ ಬಾಯಿ ತೆರೆಯದ ಮೂಕನ ಹಾಗಿದ್ದೇನೆ.
[14] ನಾನು ಕಿವಿ ಕೇಳಿಸದವನಂತೆ ಇದ್ದೇನೆ. ನಾನು ಪ್ರತ್ಯುತ್ತರ ಕೊಡಲಾರದಂತೆಯೂ ಇದ್ದೇನೆ.
[15] ಯೆಹೋವ ದೇವರೇ, ನಿಮ್ಮನ್ನೇ ಎದುರು ನೋಡುತ್ತೇನೆ; ನನ್ನ ದೇವರಾದ ಯೆಹೋವ ದೇವರೇ, ನೀವು ಉತ್ತರ ಕೊಡುವಿರಿ.
[16] ಏಕೆಂದರೆ ನಾನು, “ಅವರು ನನಗೋಸ್ಕರ ಸಂತೋಷಪಡದೆ ಇರಲಿ ನನ್ನ ಪಾದ ಜಾರುವಾಗ ಅವರು ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳದಿರಲಿ,” ಎಂದುಕೊಂಡೆನು.
[17] ನಾನು ಎಡವಿ ಬೀಳಲಿದ್ದೇನೆ; ನನ್ನ ನೋವು ಯಾವಾಗಲೂ ನನ್ನ ಮುಂದೆ ಇದೆ.
[18] ನನ್ನ ಅಕ್ರಮವನ್ನು ಅರಿಕೆ ಮಾಡುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.
[19] ನನ್ನ ಶತ್ರುಗಳು ಬಲಗೊಂಡಿದ್ದಾರೆ. ನನ್ನನ್ನು ವಿನಾಕಾರಣವಾಗಿ ದ್ವೇಷಿಸುವವರು ಹೆಚ್ಚಿದ್ದಾರೆ.
[20] ನನ್ನ ಶತ್ರುಗಳು ಒಳ್ಳೆಯದಕ್ಕೆ ಬದಲಾಗಿ ಕೇಡನ್ನು ಸಲ್ಲಿಸುತ್ತಿದ್ದಾರೆ. ನಾನು ಒಳ್ಳೆಯದನ್ನು ಹಿಂದಟ್ಟುವ ಕಾರಣ ನನ್ನನ್ನು ಎದುರಿಸುತ್ತಾರೆ.
[21] ಯೆಹೋವ ದೇವರೇ, ನನ್ನನ್ನು ಬಿಡಬೇಡಿರಿ; ನನ್ನ ದೇವರೇ, ನನಗೆ ದೂರವಾಗಿರಬೇಡಿರಿ.
[22] ನನ್ನ ರಕ್ಷಕ ಆಗಿರುವ ಯೆಹೋವ ದೇವರೇ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.