Skip to content
Opens in a new window
Listen to this chapter • 1:44

[1] ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ.

[2] ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ.

[3] ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.

[4] ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು.

[5] ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು.

[6] ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು.

[7] ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು.

[8] ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.

[9] ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.

[10] ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು.

[11] ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.

ಕೀರ್ತನೆಗಳು — Chapters