[1] ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ಮನಃಪೂರ್ವಕವಾಗಿ ಹಾಡುತ್ತಾ, ನಿಮ್ಮ ಕೀರ್ತನೆಯನ್ನು ಮಾಡುವೆನು.
[2] ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯವನ್ನು ಎಚ್ಚರಗೊಳಿಸುವೆನು.
[3] ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.
[4] ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.
[5] ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
[6] ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
[7] ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
[8] ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
[9] ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
[10] ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
[11] ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
[12] ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
[13] ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.