Skip to content
Opens in a new window
Listen to this chapter • 2:28

[1] ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು.

[2] “ನನ್ನ ಆಶ್ರಯವೂ, ನನ್ನ ಕೋಟೆಯೂ, ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು.”

[3] ನಿಶ್ಚಯವಾಗಿ ದೇವರು ನಿಮ್ಮನ್ನು ಬೇಡನ ಉರುಲಿನಿಂದ ರಕ್ಷಿಸುವರು. ಮರಣಾಂತಿಕವಾದ ಸಾಂಕ್ರಾಮಿಕ ರೋಗದಿಂದಲೂ ಬಿಡಿಸುವರು.

[4] ತಮ್ಮ ರೆಕ್ಕೆಗಳಿಂದ ನಿಮ್ಮನ್ನು ಹೊದಿಸುವರು. ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿರಿ. ದೇವರ ಸತ್ಯತೆಯು ನಿಮ್ಮ ಖೇಡ್ಯವೂ ಕೋಟೆಯೂ ಆಗಿರುವುದು.

[5] ರಾತ್ರಿಯ ಭಯಂಕರತೆಗೆ ನೀನು ಅಂಜಬೇಕಾಗಿಲ್ಲ, ಹಗಲಿನಲ್ಲಿ ಹಾರುವ ಬಾಣಕ್ಕೂ ಹೆದರಬೇಕಾಗಿರುವುದಿಲ್ಲ.

[6] ಅಂಧಕಾರದಲ್ಲಿ ಬೆನ್ನಟ್ಟಿ ಬರುವ ವಿಪತ್ತಿಗೆ ಕಳವಳಪಡದಿರುವೆ. ಮಧ್ಯಾಹ್ನದಲ್ಲಿ ಹಾಳುಮಾಡುವ ವ್ಯಾಧಿಗೂ ನೀನು ಭಯಪಡದಿರುವೆ.

[7] ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ.

[8] ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ.

[9] “ಮಹೋನ್ನತ ದೇವರು ನಮ್ಮ ಆಶ್ರಯ,” ಎಂದು ಹೇಳುವದಾದರೆ, ಯೆಹೋವ ದೇವರು ನಿಮ್ಮ ನಿವಾಸವಾಗಿ ಮಾಡಿಕೊಂಡರೆ,

[10] ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ.

[11] ಏಕೆಂದರೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವುದಕ್ಕೆ ದೇವರು ತಮ್ಮ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವರು.

[12] ನಿಮ್ಮ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.

[13] ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆಯುವೆ. ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದುಬಿಡುವೆ.

[14] “ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು.

[15] ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು.

[16] ದೀರ್ಘಾಯುಷ್ಯದಿಂದ ಆತನನ್ನು ತೃಪ್ತಿಪಡಿಸಿ, ನನ್ನ ರಕ್ಷಣೆಯನ್ನು ಆತನಿಗೆ ತೋರಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

ಕೀರ್ತನೆಗಳು — Chapters