Skip to content
Opens in a new window
Listen to this chapter • 2:08

[1] ಯೆಹೋವ ದೇವರೇ, ನಿಮ್ಮ ಬಲದಲ್ಲಿ ಅರಸನು ಆನಂದಿಸುತ್ತಾನೆ; ನೀವು ಆತನಿಗೆ ಕೊಡುವ ಜಯಗಳಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುತ್ತಾನೆ!

[2] ಅರಸನ ಹೃದಯದ ಆಶೆಯನ್ನು ನೀವು ಈಡೇರಿಸಿದ್ದೀರಿ; ಆತನ ತುಟಿಗಳ ಬಿನ್ನಹವನ್ನು ಹಿಂದಿಟ್ಟುಕೊಳ್ಳಲಿಲ್ಲ.

[3] ನೀವು ಉತ್ತಮ ಆಶೀರ್ವಾದಗಳಿಂದ ಅರಸನನ್ನು ಸ್ವಾಗತಿಸಿದ್ದೀರಿ; ಚೊಕ್ಕ ಬಂಗಾರದ ಕಿರೀಟವನ್ನು ಆತನ ತಲೆಯ ಮೇಲಿಟ್ಟಿದ್ದೀರಿ.

[4] ಜೀವವನ್ನು ಅರಸನು ನಿಮ್ಮಿಂದ ಬೇಡಲು, ನೀವು ಆತನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟಿದ್ದೀರಿ.

[5] ನೀವು ಕೊಟ್ಟ ಜಯಗಳ ಮೂಲಕ ಅರಸನ ಪ್ರಭಾವ ಹೆಚ್ಚಾಗಿದೆ; ಗೌರವವನ್ನೂ ಘನತೆಯನ್ನೂ ಆತನ ಮೇಲೆ ಇಟ್ಟಿರುತ್ತೀರಿ.

[6] ನೀವು ನಿಶ್ಚಯವಾಗಿ ಅರಸನಿಗೆ ನಿತ್ಯ ಆಶೀರ್ವಾದ ದಯಪಾಲಿಸಿದ್ದೀರಿ; ನಿಮ್ಮ ಸನ್ನಿಧಿಯಲ್ಲಿ ಆತನು ಅಧಿಕ ಆನಂದಪಡುವಂತೆ ಮಾಡಿದ್ದೀರಿ.

[7] ಏಕೆಂದರೆ ಅರಸನು ಯೆಹೋವ ದೇವರಲ್ಲಿ ಭರವಸೆ ಇಡುತ್ತಾನೆ; ಮಹೋನ್ನತರ ಒಡಂಬಡಿಕೆಯ ಪ್ರೀತಿಯಿಂದ ಅರಸನು ಕದಲದೆ ಇರುವನು.

[8] ನಿಮ್ಮ ಹಸ್ತವು ನಿಮ್ಮ ಶತ್ರುಗಳನ್ನೆಲ್ಲಾ ವಶಪಡಿಸಿಕೊಳ್ಳುವುದು. ನಿಮ್ಮ ಬಲಗೈ ನಿಮ್ಮ ವೈರಿಗಳನ್ನು ಸಿಕ್ಕಿಸುವುದು.

[9] ನೀವು ಬರುವ ಕಾಲದಲ್ಲಿ ಅವರನ್ನು ಅಗ್ನಿಕುಂಡದಂತೆ ದಹಿಸಿಬಿಡುವಿರಿ. ಯೆಹೋವ ದೇವರು ತಮ್ಮ ಬೇಸರದಿಂದ ಅವರನ್ನು ದಂಡಿಸಿಬಿಡುವರು; ಬೆಂಕಿಯು ಅವರನ್ನು ಭಸ್ಮ ಮಾಡುವುದು.

[10] ಅವರ ವಂಶವನ್ನು ಭೂಲೋಕದೊಳಗಿಂದಲೂ ಅವರ ಸಂತತಿಯನ್ನು ಮಾನವರೊಳಗಿಂದಲೂ ಉಳಿಯದಿರಲಿ.

[11] ಅವರು ನಿಮಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು, ಅವರು ಕುಯುಕ್ತಿಯನ್ನು ಕಲ್ಪಿಸಿದರೂ ಅದು ಕೈಗೂಡದಿರಲಿ.

[12] ನಿಮ್ಮ ಬಿಲ್ಲನ್ನು ಅವರಿಗೆ ವಿರೋಧವಾಗಿ ಎತ್ತುವಾಗ ಅವರು ನಿಮಗೆ ಬೆನ್ನುಮಾಡಿ ಓಡಿಹೋಗಲಿ.

[13] ಯೆಹೋವ ದೇವರೇ, ನಿಮ್ಮ ಬಲದಲ್ಲಿ ಉನ್ನತರಾಗಿದ್ದೀರಿ, ನಾವು ನಿಮ್ಮ ಪರಾಕ್ರಮವನ್ನು ಹಾಡಿ ಕೀರ್ತಿಸುವೆವು.

ಕೀರ್ತನೆಗಳು — Chapters