Skip to content
Opens in a new window
Listen to this chapter • 2:14

[1] ದೇವರೇ, ಚೀಯೋನಿನಲ್ಲಿ ನಿಮಗೋಸ್ಕರ ಸ್ತೋತ್ರವು ಕಾದಿದೆ. ನಿಮಗೆ ನಮ್ಮ ಹರಕೆಗಳನ್ನು ಪೂರೈಸುವೆವು.

[2] ಪ್ರಾರ್ಥನೆಯನ್ನು ಕೇಳುವವರೇ, ಎಲ್ಲಾ ಜನರು ನಿಮ್ಮ ಬಳಿಗೆ ಬರುವರು.

[3] ನಾವು ನಮ್ಮ ಪಾಪಗಳಿಂದ ತುಂಬಿಹೋಗಿರುವಾಗ ನೀವೇ ನಮ್ಮ ದ್ರೋಹಗಳಿಗಾಗಿ ದೋಷಪರಿಹಾರಕರು.

[4] ನೀವು ಆಯ್ದುಕೊಂಡು ನಿಮ್ಮ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು. ಏಕೆಂದರೆ ನಿಮ್ಮ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿಮ್ಮ ಪರಿಶುದ್ಧ ಮಂದಿರವಾದ ನಿಮ್ಮ ಆಲಯದ ಒಳ್ಳೆಯ ಸಂಗತಿಗಳಿಂದ ನಮಗೆ ತೃಪ್ತಿಯಾಗಲಿ.

[5] ಅತಿಶಯ ಹಾಗು ನೀತಿಯ ಕೃತ್ಯಗಳನ್ನು ನಡೆಸಿ, ನೀವು ನಮಗೆ ಉತ್ತರ ಕೊಡುವಿರಿ. ನಮ್ಮ ರಕ್ಷಣೆಯ ದೇವರೇ, ಭೂಮಿಯಲ್ಲಿರುವವರಿಗೂ, ಸಮುದ್ರದ ಆಚೆ ದೂರವಾಗಿರುವವರಿಗೂ ನೀವು ಭರವಸೆಯಾಗಿದ್ದೀರಿ.

[6] ಬೆಟ್ಟಗಳನ್ನು ನಿಮ್ಮ ಶಕ್ತಿಯಿಂದ ರೂಪಿಸಿದವರು ನೀವೇ. ಜಲದಿಂದ ನಡು ಕಟ್ಟಿಕೊಂಡಿರುವವರೂ ನೀವೇ.

[7] ಸಮುದ್ರಗಳ ಘೋಷವನ್ನೂ, ಅವುಗಳ ತೆರೆಗಳ ಘೋಷವನ್ನೂ, ಪ್ರಜೆಗಳ ಕೋಲಾಹಲವನ್ನೂ ಶಮನಗೊಳಿಸುವವರು ನೀವೇ.

[8] ಇಡೀ ಭೂಮಿಯಲ್ಲಿರುವವರು ನಿಮ್ಮ ಅದ್ಭುತಕಾರ್ಯಗಳಿಗೆ ಅತಿಶಯಗೊಂಡಿದ್ದಾರೆ. ಉದಯಾಸ್ತಮಾನಗಳಲ್ಲಿ ಇರುವವರನ್ನು ಉತ್ಸಾಹ ಧ್ವನಿಗೈಯುವಂತೆ ಮಾಡುತ್ತೀರಿ.

[9] ಭೂಮಿಯನ್ನು ಸಂಧಿಸಿ, ಅದಕ್ಕೆ ಮಳೆಬರುವಂತೆ, ಅದನ್ನು ಫಲವತ್ತಾಗಿ ಮಾಡುತ್ತೀರಿ. ದೇವರ ನದಿಯು ನೀರಿನಿಂದ ತುಂಬಿದೆ. ಹೀಗೆ ಭೂಮಿಯನ್ನು ಸಿದ್ಧಮಾಡಿ, ಜನರಿಗೆ ನೀವು ಧಾನ್ಯವನ್ನು ಒದಗಿಸುತ್ತೀರಿ.

[10] ನೇಗಿಲ ಸಾಲುಗಳನ್ನು ಸಮಮಾಡುತ್ತೀರಿ. ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀರಿ, ಅದರ ಮೊಳಕೆಯನ್ನು ಆಶೀರ್ವದಿಸುತ್ತೀರಿ.

[11] ವರ್ಷಕ್ಕೆ ನಿಮ್ಮ ಉದಾರತೆಯ ಕಿರೀಟವನ್ನು ಇಡುತ್ತೀರಿ. ನಿಮ್ಮ ಹಾದಿಗಳು ಸಮೃದ್ಧಿಯಿಂದ ತುಂಬಿ ಪ್ರವಾಹಿಸುತ್ತಿದೆ.

[12] ಮರುಭೂಮಿಯ ಹುಲ್ಲುಗಾವಲಲ್ಲಿ ವೃಷ್ಟಿಯಾಗಿದೆ. ಗುಡ್ಡಗಳು ಉಲ್ಲಾಸವನ್ನು ಧರಿಸಿಕೊಂಡಿವೆ.

[13] ಹುಲ್ಲುಗಾವಲುಗಳು ಮಂದೆಗಳಿಂದ ಹೊದಿಕೆಯಾಗಿವೆ. ಕಣಿವೆಗಳು ಸಹ ಧಾನ್ಯದಿಂದ ಮುಚ್ಚಿರುತ್ತವೆ. ಅವು ಉತ್ಸಾಹಗೊಂಡು ಹಾಡುತ್ತವೆ.

ಕೀರ್ತನೆಗಳು — Chapters