[1] ನನ್ನ ದೇವರೇ, ನನ್ನನ್ನು ಕಾಪಾಡು, ಏಕೆಂದರೆ ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
[2] ನಾನು ಯೆಹೋವ ದೇವರಿಗೆ, “ನೀವೇ ನನ್ನ ಕರ್ತ; ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು,” ಎಂದು ಹೇಳಿದೆನು.
[3] ಭೂಲೋಕದಲ್ಲಿರುವ ದೇವಜನರ ಕುರಿತು, “ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು,” ಎಂದು ಹೇಳುವೆನು.
[4] ಇತರ ದೇವರುಗಳನ್ನು ಅವಲಂಬಿಸಿರುವವರಿಗೆ ವ್ಯಥೆಗಳು ಹೆಚ್ಚೆಚ್ಚಾಗುವವು. ಅವರಂತೆ ರಕ್ತ ಬಲಿಗಳನ್ನು ನಾನು ಅರ್ಪಿಸುವುದಿಲ್ಲ. ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಉಚ್ಚರಿಸುವುದಿಲ್ಲ.
[5] ಯೆಹೋವ ದೇವರೇ, ನೀವೇ ನನ್ನ ಪಾಲೂ, ನನ್ನ ಪಾತ್ರೆಯೂ ಆಗಿದ್ದೀರಿ; ನನ್ನ ಸ್ವಾಸ್ತ್ಯವನ್ನು ಸುರಕ್ಷಿತವಾಗಿ ಇಡುವವರು ನೀವೇ.
[6] ನನ್ನ ಪಾಲಿಗೆ ಬಂದ ಮೇರೆಯ ಸ್ಥಳವೂ ಸುಂದರವಾದದ್ದು; ನಿಶ್ಚಯವಾಗಿಯೂ, ನನಗೆ ದೊರೆತ ಸ್ವತ್ತು ಆನಂದಕರವಾದದ್ದು.
[7] ನನಗೆ ಸಮಾಲೋಚನೆ ನೀಡುತ್ತಿರುವ ಯೆಹೋವ ದೇವರನ್ನು ನಾನು ಸ್ತುತಿಸುತ್ತಿರುವೆನು; ರಾತ್ರಿಯಲ್ಲಿಯೂ ನನ್ನ ಹೃದಯವು ನನಗೆ ಬೋಧಿಸುತ್ತದೆ.
[8] ನಾನು ಯೆಹೋವ ದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ಅವರು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲೆನು.
[9] ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ಸುರಕ್ಷಿತವಾಗಿ ವಿಶ್ರಮಿಸುವುದು.
[10] ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ; ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ.
[11] ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ. ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ; ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.