[1] ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
[2] ನೀವು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರರಾಗಿದ್ದೀರಿ. ನಿಮ್ಮ ತುಟಿಗಳಲ್ಲಿ ಕೃಪೆಯ ಅಭಿಷೇಕವಿದೆ; ಆದ್ದರಿಂದ ದೇವರು ಎಂದೆಂದಿಗೂ ನಿಮ್ಮನ್ನು ಆಶೀರ್ವದಿಸಿದ್ದಾರೆ.
[3] ಪರಾಕ್ರಮಶಾಲಿಯೇ, ನಿಮ್ಮ ಖಡ್ಗವನ್ನು ಸೊಂಟಕ್ಕೆ ಬಿಗಿದುಕೊಳ್ಳಿರಿ. ನಿಮ್ಮ ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಳ್ಳಿರಿ.
[4] ನೀವು ಸತ್ಯತೆ ದೀನತ್ವ ಹಾಗು ನೀತಿಗೋಸ್ಕರ ನಿಮ್ಮ ಘನತೆಯಿಂದ ಜಯದ ಸವಾರಿ ಮಾಡಿರಿ. ನಿಮ್ಮ ಬಲಗೈ ಮಹಾಕೃತ್ಯಗಳನ್ನು ಪ್ರಕಾಶಪಡಿಸಲಿ.
[5] ನಿಮ್ಮ ಹದವಾದ ಬಾಣಗಳು ರಾಜದ್ರೋಹಿಗಳನ್ನು ಇರಿಯಲಿ. ಜನಾಂಗಗಳು ನಿಮ್ಮ ಪಾದಕ್ಕೆ ಬೀಳಲಿ.
[6] ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನ್ಯಾಯದಂಡವೇ ನಿಮ್ಮ ರಾಜದಂಡವಾಗಿದೆ.
[7] ನೀವು ನೀತಿಯನ್ನು ಪ್ರೀತಿಸುತ್ತೀರಿ, ಅನೀತಿಯನ್ನು ದ್ವೇಷಿಸುತ್ತೀರಿ. ಆದ್ದರಿಂದ ದೇವರೇ, ನಿಮ್ಮ ದೇವರು, ನಿಮ್ಮ ಸಂಗಡಿಗರಿಗಿಂತ ನಿಮ್ಮನ್ನು ಉನ್ನತಗೊಳಿಸಿ ಆನಂದ ತೈಲದಿಂದ ಅಭಿಷೇಕಿಸಿದ್ದಾರೆ.
[8] ನಿಮ್ಮ ವಸ್ತ್ರಗಳೆಲ್ಲಾ ರಸಗಂಧವೂ ಅಗರೂ ಚಂದನ ಇವುಗಳ ಸುವಾಸನೆ ಬೀರುತ್ತದೆ. ದಂತದ ಅರಮನೆಯೊಳಗಿಂದ ಉನ್ನತ ವಾದ್ಯಗಳು ನಿಮ್ಮನ್ನು ಆನಂದಗೊಳಿಸುವುದು.
[9] ರಾಜ ಪುತ್ರಿಯರು ನಿಮ್ಮ ಗೌರವ ಸ್ತ್ರೀಯರಲ್ಲಿ ಇದ್ದಾರೆ. ನಿಮ್ಮ ಬಲಗಡೆ ರಾಣಿಯು ಓಫೀರ್ ಬಂಗಾರವನ್ನು ಧರಿಸಿದ್ದಾಳೆ.
[10] ಕೇಳು ಮಗಳೇ, ಇದನ್ನು ಆಲೋಚಿಸಿ, ಕಿವಿಗೊಡು. ನಿಮ್ಮ ಜನರನ್ನೂ, ನಿಮ್ಮ ತಂದೆಯ ಮನೆಯನ್ನೂ ಮರೆತುಬಿಡು.
[11] ನಿನ್ನ ಸೌಂದರ್ಯವನ್ನು ಮಹಾರಾಜರು ಮೆಚ್ಚಲಿ, ಅವರೇ ನಿನ್ನ ಒಡೆಯ ಅವರನ್ನು ಗೌರವಿಸು.
[12] ಟೈರಿನ ಮಗಳು ಕಾಣಿಕೆಯೊಂದಿಗೆ ಬರುವಳು; ಐಶ್ವರ್ಯವಂತರು ನಿನ್ನನ್ನು ವರಿಸಲು ಹುಡುಕಿ ಬರುವರು.
[13] ಅರಸನ ಮಗಳು ತನ್ನ ಅಂತಃಪುರದಲ್ಲಿ ಪೂರ್ಣ ವೈಭವದಿಂದ ಇದ್ದಾಳೆ. ಅವಳ ವಸ್ತ್ರವು ಚಿನ್ನದಿಂದ ನೇಯ್ದಿದೆ.
[14] ಕಸೂತಿ ಉಡುಪುಗಳಲ್ಲಿ ಮಹಾರಾಜರ ಬಳಿಗೆ ಆಕೆಯು ಹೊರಡುತ್ತಾಳೆ, ಅವಳ ಸಂಗಡ ಸಖಿಯರಾದ ಕನ್ಯೆಯರು ಸಹ ಹೊರಡುವರು.
[15] ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ಆಕೆಯನ್ನು ತರುತ್ತಿದ್ದಾರೆ. ಹೀಗೆ ಅವರು ರಾಜಭವನದೊಳಗೆ ಪ್ರವೇಶಿಸುವರು.
[16] ನಿಮ್ಮ ಪಿತೃಗಳ ಸ್ಥಳಗಳನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವರು. ಮಹಾರಾಜರು ಅವರನ್ನು ಭೂಮಿಯ ದೇಶದಲ್ಲೆಲ್ಲಾ ರಾಜಪುತ್ರರಾಗಿ ಇರಿಸುವರು.
[17] ತಲತಲಾಂತರವೂ ನಿಮ್ಮ ಹೆಸರನ್ನು ನಾನು ಸ್ಮರಿಸುವಂತೆ ಮಾಡುವೆನು. ಆದ್ದರಿಂದ ಜನರು ಯುಗಯುಗಾಂತರವೂ ನಿಮ್ಮನ್ನು ಹೊಗಳುವರು.