[1] ಯೆಹೋವ ದೇವರೇ, ನೀವು ದೂರದಲ್ಲಿ ನಿಂತುಕೊಳ್ಳುವುದು ಏಕೆ? ಇಕ್ಕಟ್ಟಿನ ಕಾಲಗಳಲ್ಲಿ ನೀವು ಮರೆಯಾಗಿರುವುದೂ ಏಕೆ?
[2] ದುಷ್ಟನು ಗರ್ವದಿಂದ ದೀನನನ್ನು ಬೇಟೆಯಾಡುತ್ತಾನೆ, ಅವನು ಕಲ್ಪಿಸಿದ ಕುಯುಕ್ತಿಗಳಲ್ಲಿ ಅವನೇ ಸಿಕ್ಕಿಬೀಳುತ್ತಾನೆ.
[3] ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ.
[4] ದುಷ್ಟನು ತನ್ನ ಗರ್ವದಲ್ಲಿ ದೇವರನ್ನು ಹುಡುಕುವುದಿಲ್ಲ; ಅವನ ಎಲ್ಲ ಯೋಚನೆಗಳಲ್ಲಿಯೂ ದೇವರಿಗೆ ಸ್ಥಳವೇ ಇಲ್ಲ.
[5] ಅವನ ಮಾರ್ಗಗಳು ಯಾವಾಗಲೂ ಸಮೃದ್ಧಿಯಾಗಿರುತ್ತವೆ; ಆದರೆ ನಿಮ್ಮ ನಿಯಮಗಳು ಅವನ ದೃಷ್ಟಿಗೆ ಬಹು ದೂರವಾಗಿವೆ; ಅವನು ತನ್ನ ಎಲ್ಲಾ ವೈರಿಗಳನ್ನು ಹೀಯಾಳಿಸುತ್ತಾನೆ.
[6] ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.”
[7] ಅವನ ಬಾಯಿ ಸುಳ್ಳಿನಿಂದಲೂ ಬೆದರಿಕೆಯಿಂದಲೂ ತುಂಬಿದೆ. ಕೇಡೂ ನಾಶನವೂ ಅವನ ನಾಲಿಗೆಯ ಕೆಳಗೆ ಇರುತ್ತವೆ.
[8] ಅವನು ಗ್ರಾಮಗಳಲ್ಲಿ ಹೊಂಚಿಕೊಂಡು ಮರೆಯಾದ ಸ್ಥಳಗಳಲ್ಲಿ, ನಿರಪರಾಧಿಯನ್ನು ಕೊಲ್ಲುತ್ತಾನೆ. ಅವನ ಕಣ್ಣುಗಳು ನಿರ್ಗತಿಕರನ್ನು ಹೊಂಚಿ ನೋಡುತ್ತವೆ;
[9] ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ.
[10] ಅವನ ಕೈಯಲ್ಲಿ ಸಿಕ್ಕುವವರು ಜಜ್ಜಿಹೋಗುತ್ತಾರೆ, ಅವನ ಬಲದ ಎದುರು ಸೋತುಹೋಗುತ್ತಾರೆ.
[11] “ದೇವರು ಮರೆತುಬಿಟ್ಟಿದ್ದಾರೆ; ತಮ್ಮ ಮುಖ ಮರೆ ಮಾಡಿಕೊಂಡಿದ್ದಾರೆ; ಇನ್ನೆಂದೂ ಕಾಣಲಾರರು,” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ.
[12] ಯೆಹೋವ ದೇವರೇ, ಎದ್ದೇಳಿರಿ! ದೇವರೇ, ನಿಮ್ಮ ಕೈ ಎತ್ತಿರಿ. ನಿಸ್ಸಹಾಯಕರನ್ನು ಮರೆಯಬೇಡಿರಿ.
[13] ದುಷ್ಟರು ದೇವರನ್ನು ಅಲಕ್ಷ್ಯ ಮಾಡುವುದು ಏಕೆ? “ದೇವರು ನನ್ನನ್ನು ಲೆಕ್ಕ ಕೇಳುವುದಿಲ್ಲ,” ಎಂದು ಅವನು ತನಗೆ ತಾನೇ ಹೇಳಿಕೊಳ್ಳುವುದು ಏಕೆ?
[14] ದೇವರೇ, ನೀವಾದರೋ ಬಾಧೆಪಡುವವರ ಕಷ್ಟಗಳನ್ನು ನೋಡಿದ್ದೀರಿ; ಅವರ ಸಂಕಟವನ್ನು ಪರಿಗಣಿಸಿ, ನೀವೇ ನೋಡಿಕೊಳ್ಳಿರಿ. ಗತಿಯಿಲ್ಲದವರು ತಮ್ಮನ್ನು ನಿಮಗೇ ಒಪ್ಪಿಸಿಕೊಡುತ್ತಾರೆ; ನೀವೇ ದಿಕ್ಕಿಲ್ಲದವರಿಗೆ ಸಹಾಯ ಮಾಡುವವರು.
[15] ದುಷ್ಟನ ಭುಜಬಲವನ್ನು ಮುರಿದುಬಿಡಿರಿ; ಕೆಟ್ಟದ್ದನ್ನು ಮಾಡುವವರಿಗೆ ಅವರ ಕೆಟ್ಟತನಕ್ಕೆ ಲೆಕ್ಕ ಕೇಳಿರಿ; ಇಲ್ಲದಿದ್ದರೆ ನೀವು ಅವನನ್ನು ಲೆಕ್ಕ ಕೇಳುವುದಿಲ್ಲ ಅಂದುಕೊಳ್ಳುವನು.
[16] ಯೆಹೋವ ದೇವರು ಯುಗಯುಗಾಂತರಗಳಿಗೂ ಅರಸರಾಗಿದ್ದಾರೆ; ರಾಷ್ಟ್ರಗಳು ಅವರ ದೇಶದೊಳಗಿಂದ ಹೊರಹಾಕಲಾಯಿತು.
[17] ಯೆಹೋವ ದೇವರೇ, ನೀವು ಬಾಧೆಪಡುವವರ ಬಯಕೆಯನ್ನು ಆಲಿಸುತ್ತೀರಿ; ಅವರನ್ನು ಪ್ರೋತ್ಸಾಹಿಸಿ, ಅವರ ಕೂಗನ್ನು ಲಾಲಿಸುತ್ತೀರಿ.
[18] ಅನಾಥರಿಗೂ, ಕುಗ್ಗಿದವರಿಗೂ ನ್ಯಾಯವನ್ನು ನಡಿಸಿಕೊಡಿರಿ. ಹೀಗಾದರೆ ಕೇವಲ ಮಣ್ಣಿನ ಮಾನವರಿಂದ ಅವರಿಗೆ ಇನ್ನೆಂದಿಗೂ ಭಯ ಉಂಟಾಗುವುದಿಲ್ಲ.