Skip to content
Opens in a new window
Listen to this chapter • 2:04

[1] ಯಾರ ಉಲ್ಲಂಘನೆಗಳು ಕ್ಷಮಿಸಲಾಗಿವೆಯೋ, ಯಾರ ಪಾಪಗಳು ಮುಚ್ಚಲಾಗಿವೆಯೋ ಅವರೇ ಧನ್ಯರು.

[2] ಯೆಹೋವ ದೇವರು ಯಾರ ಅನ್ಯಾಯವನ್ನು ಎಣಿಸುವುದಿಲ್ಲವೋ, ಯಾರ ಆತ್ಮದಲ್ಲಿ ವಂಚನೆ ಇರುವುದಿಲ್ಲವೋ ಆ ಮನುಷ್ಯನು ಧನ್ಯನು.

[3] ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದು ಹೋದವು.

[4] ದೇವರೇ, ರಾತ್ರಿ ಹಗಲು ನಿಮ್ಮ ಕೈ ನನ್ನ ಮೇಲೆ ಭಾರವಾಗಿತ್ತು; ನನ್ನ ಬಲವು ಬೇಸಿಗೆಯ ಬಿಸಿಲಿನಲ್ಲಿ ಕುಂದಿಹೋಗುವಂತೆ ಆಯಿತು.

[5] ನನ್ನ ಪಾಪವನ್ನು ನಿಮಗೆ ತಿಳಿಸಿ, ನನ್ನ ಅನ್ಯಾಯವನ್ನು ಮರೆಮಾಡದೆ, “ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ ಅರಿಕೆ ಮಾಡುವೆನು,” ಎಂದು ಹೇಳಿದೆನು; ಆಗ, ನೀವು ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ.

[6] ಆದುದರಿಂದ ಭಕ್ತರೆಲ್ಲರು ನೀವು ಸಿಕ್ಕುವ ಕಾಲದಲ್ಲಿ ನಿಮಗೆ ಪ್ರಾರ್ಥನೆ ಮಾಡಲಿ; ನಿಶ್ಚಯವಾಗಿ ನೀರಿನ ಮಹಾಪ್ರವಾಹಗಳು ಅವರ ಸಮೀಪಕ್ಕೆ ಬರುವುದಿಲ್ಲ.

[7] ನೀವು ನನಗೆ ಮರೆಮಾಡುವ ಸ್ಥಳವಾಗಿರುವಿರಿ; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀರಿ; ವಿಮೋಚನಾ ಧ್ವನಿಗಳಿಂದ ನೀವು ನನ್ನನ್ನು ಸುತ್ತುವರಿಯುತ್ತೀರಿ.

[8] ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ, ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು.

[9] ವಿವೇಕವಿಲ್ಲದ ಕುದುರೆಯ ಹಾಗೆಯೂ, ಹೇಸರಗತ್ತೆಯ ಹಾಗೆಯೂ ಇರಬೇಡಿರಿ; ಬಾರಿನಿಂದಲೂ, ಕಡಿವಾಣದಿಂದಲೂ ಅವುಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.

[10] ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು.

[11] ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯ ಉಳ್ಳವರೇ, ಜಯಗೀತೆ ಹಾಡಿರಿ.

ಕೀರ್ತನೆಗಳು — Chapters