[1] ನಾನು ಎಲ್ಲಾ ಕಾಲಗಳಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು; ಅವರ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.
[2] ಯೆಹೋವ ದೇವರಲ್ಲಿ ನನ್ನ ಪ್ರಾಣವು ಹಿಗ್ಗುವುದು; ಇದನ್ನು ದೀನರು ಕೇಳಿ ಸಂತೋಷಪಡುವರು.
[3] ನನ್ನ ಸಂಗಡ ಯೆಹೋವ ದೇವರನ್ನು ಮಹಿಮೆಪಡಿಸಿರಿ; ನಾವು ಒಟ್ಟಾಗಿ ಅವರ ಹೆಸರನ್ನು ಘನಪಡಿಸೋಣ.
[4] ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು.
[5] ದೇವರನ್ನು ದೃಷ್ಟಿಸಿದವರು ಪ್ರಕಾಶ ಹೊಂದಿದರು; ಅಂಥವರ ಮುಖಗಳು ನಾಚಿಕೆಯಿಂದ ಕುಂದಿಹೋಗುವುದಿಲ್ಲ.
[6] ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು.
[7] ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.
[8] ಯೆಹೋವ ದೇವರು ಒಳ್ಳೆಯವರೆಂದು ರುಚಿಸಿ ನೋಡಿರಿ; ಅವರನ್ನು ಆಶ್ರಯಿಸುವ ಮನುಷ್ಯನು ಭಾಗ್ಯವಂತನು.
[9] ದೇವರ ಭಕ್ತರೇ, ನೀವು ಯೆಹೋವ ದೇವರಿಗೆ ಭಯಪಡಿರಿ; ಏಕೆಂದರೆ ದೇವಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇಲ್ಲ.
[10] ಸಿಂಹಗಳು ಹಸಿದು ಬಳಲಬಹುದು, ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ.
[11] ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಯೆಹೋವ ದೇವರ ಬಗ್ಗೆ ಭಯವನ್ನು ನಿಮಗೆ ಕಲಿಸುವೆನು.
[12] ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು ಮತ್ತು ಬಹಳ ದಿನಗಳವರೆಗೆ ಬದುಕಬೇಕೆ?
[13] ನೀನು ಕೇಡಿನಿಂದ ನಿನ್ನ ನಾಲಿಗೆಯನ್ನು, ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ನಿಯಂತ್ರಿಸಿಕೋ.
[14] ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
[15] ನೀತಿವಂತರ ಮೇಲೆ ಯೆಹೋವ ದೇವರು ದೃಷ್ಟಿ ಇಡುತ್ತಾರೆ, ಅವರು ಮೊರೆಯಿಡುವಾಗ ದೇವರು ಕಿವಿಗೊಡುತ್ತಾರೆ.
[16] ಆದರೆ ಕೆಟ್ಟದ್ದನ್ನು ಮಾಡುವವರಿಗೆ ಯೆಹೋವ ದೇವರು ವಿಮುಖರಾಗಿದ್ದಾರೆ, ಅಂಥವರ ಹೆಸರನ್ನು ಭೂಮಿಯೊಳಗಿಂದ ತೆಗೆದುಹಾಕುವರು.
[17] ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ.
[18] ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ.
[19] ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.
[20] ಅವರು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾರೆ; ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ.
[21] ಕೇಡು ದುಷ್ಟನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಶಿಕ್ಷೆಗೆ ಒಳಗಾಗುವರು.
[22] ಯೆಹೋವ ದೇವರು ತಮ್ಮ ಸೇವಕರ ಪ್ರಾಣವನ್ನು ವಿಮೋಚಿಸುತ್ತಾರೆ; ದೇವರನ್ನು ಆಶ್ರಯಿಸುವವರು ಯಾರೂ ಶಿಕ್ಷೆಗೆ ಒಳಗಾಗುವುದಿಲ್ಲ.