Skip to content
Opens in a new window
Listen to this chapter • 2:35

[1] ನಮಗಲ್ಲ ಯೆಹೋವ ದೇವರೇ, ನಮಗಲ್ಲ, ನಿಮ್ಮ ಹೆಸರಿಗೆ ಮಾತ್ರ ಮಹಿಮೆ, ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ.

[2] “ಅವರ ದೇವರು ಎಲ್ಲಿ?” ಎಂದು ಜನಾಂಗಗಳು ಏಕೆ ಹೇಳಬೇಕು?

[3] ನಮ್ಮ ದೇವರು ಪರಲೋಕದಲ್ಲಿದ್ದಾರೆ; ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ.

[4] ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.

[5] ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.

[6] ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಮೂಗು ಉಂಟು, ಮೂಸುವದಿಲ್ಲ.

[7] ಕೈಗಳುಂಟು, ಮುಟ್ಟುವುದಿಲ್ಲ; ಕಾಲುಗಳುಂಟು, ನಡೆಯುವುದಿಲ್ಲ; ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ.

[8] ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.

[9] ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.

[10] ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.

[11] ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ.

[12] ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು; ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು; ಆರೋನನ ಮನೆಯನ್ನು ಆಶೀರ್ವದಿಸುವರು.

[13] ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು.

[14] ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು.

[15] ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ ನೀವು ಆಶೀರ್ವಾದ ಹೊಂದಿದವರು.

[16] ಉನ್ನತ ಆಕಾಶಗಳು ಯೆಹೋವ ದೇವರದೇ, ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ.

[17] ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ ಯೆಹೋವ ದೇವರನ್ನು ಸ್ತುತಿಸುವುದಿಲ್ಲ.

[18] ಆದರೆ ನಾವು ಈಗಲೂ ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು. ಯೆಹೋವ ದೇವರನ್ನು ಸ್ತುತಿಸಿರಿ.

ಕೀರ್ತನೆಗಳು — Chapters