[1] ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಭಯಪಟ್ಟು ಅವರ ಆಜ್ಞೆಗಳಲ್ಲಿ ಬಹಳವಾಗಿ ಸಂತೋಷಿಸುವವರು ಧನ್ಯರು.
[2] ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು; ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.
[3] ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು; ಅವರ ನೀತಿಯು ಶಾಶ್ವತವಾಗಿ ಉಳಿಯುವುದು.
[4] ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಮೂಡುವುದು; ಅವರು ಕೃಪೆಯೂ, ಅನುಕಂಪವೂ, ನೀತಿಯೂ ಉಳ್ಳವವರಾಗಿರುವರು.
[5] ದಯೆತೋರಿಸಿ ಸಾಲಕೊಡುವವರಿಗೆ, ಒಳ್ಳೆಯದಾಗುವುದು; ಅವರು ತಮ್ಮ ಕಾರ್ಯಗಳನ್ನು ನ್ಯಾಯದಿಂದ ನಡೆಸುವರು.
[6] ನಿಶ್ಚಯವಾಗಿ ನೀತಿವಂತರು ಎಂದೆಂದಿಗೂ ಕದಲರು; ನೀತಿವಂತರು ನಿತ್ಯವಾಗಿ ಜ್ಞಾಪಕದಲ್ಲಿ ಇರುವರು.
[7] ಅವರಿಗೆ ಅಶುಭದ ಸುದ್ದಿಯ ಭಯ ಇರುವುದಿಲ್ಲ; ಅವರ ಹೃದಯವು ಯೆಹೋವ ದೇವರಲ್ಲಿ ಭರವಸವಿಟ್ಟು ಸ್ಥಿರವಾಗಿರುವುದು.
[8] ಅವರ ಹೃದಯವು ಸುರಕ್ಷಿತವಾಗಿರುವುದು. ಅವರು ತಮ್ಮ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವರು, ಭಯಪಡರು.
[9] ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು; ಅವನ ಬಲವು ಘನದಿಂದ ಉನ್ನತವಾಗುವುದು.
[10] ದುಷ್ಟರು ಇದನ್ನು ಕಂಡು ವ್ಯಥೆ ಪಡುವರು; ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು; ದುಷ್ಟರ ಆಶೆಯು ನಾಶವಾಗುವುದು.