Skip to content
Opens in a new window
Listen to this chapter • 2:04

[1] ದೇವರೇ ನನ್ನನ್ನು ಕರುಣಿಸಿರಿ, ನನ್ನನ್ನು ಕರುಣಿಸಿರಿ. ನನ್ನ ಪ್ರಾಣವು ನಿಮ್ಮನ್ನು ಆಶ್ರಯಿಸಿಕೊಂಡಿದೆ; ಆಪತ್ತುಗಳು ದಾಟುವವರೆಗೂ ನಿಮ್ಮ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.

[2] ಮಹೋನ್ನತನಾದ ದೇವರಿಗೆ, ಮೊರೆಯಿಡುತ್ತೇನೆ. ನನಗಾಗಿ ಕಾರ್ಯಗಳಿಗೆ ನ್ಯಾಯ ನೀಡುವ ದೇವರಿಗೆ ಮೊರೆಯಿಡುತ್ತೇನೆ.

[3] ದೇವರು ಪರಲೋಕದಿಂದ ಸಹಾಯ ಕಳುಹಿಸಿ, ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು.

[4] ನಾನು ಸಿಂಹಗಳಂಥವರ ಮಧ್ಯದಲ್ಲಿದ್ದೇನೆ. ಕ್ರೂರಮೃಗಗಳಂಥವರ ಮಧ್ಯದಲ್ಲಿ ಒತ್ತಾಯವಾಗಿ ವಾಸಮಾಡುತ್ತಿದ್ದೇನೆ. ಅವರ ಹಲ್ಲು, ಭಲ್ಲೆ, ಬಾಣಗಳೂ ಅವರ ನಾಲಿಗೆ ಹದವಾದ ಖಡ್ಗವೂ ಆಗಿವೆ.

[5] ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.

[6] ಶತ್ರುಗಳು ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದಿದ್ದಾರೆ. ಅದರಲ್ಲಿ ತಾವೇ ಬಿದ್ದುಹೋದರು.

[7] ದೇವರೇ, ನನ್ನ ಹೃದಯವು ಸ್ಥಿರವಾಗಿದೆ. ಹೌದು, ನನ್ನ ಹೃದಯವು ಸ್ಥಿರವಾಗಿದೆ. ನಾನು ಸಂಗೀತದೊಡನೆ ಹಾಡುವೆನು.

[8] ಎಚ್ಚರವಾಗು, ನನ್ನ ಪ್ರಾಣವೇ, ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯಕಾಲವನ್ನು ಎಚ್ಚರಗೊಳಿಸುವೆನು.

[9] ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.

[10] ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.

[11] ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.

ಕೀರ್ತನೆಗಳು — Chapters