[1] ನನ್ನ ಹೃದಯದಲ್ಲಿ ದೇವರಿಂದ ಬಂದ ಸಂದೇಶವು ದುಷ್ಟರ ಪಾಪದ ಬಗ್ಗೆ ಹೀಗಿರುತ್ತದೆ: ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.
[2] ತಮ್ಮ ಪಾಪವನ್ನು ಹಗೆ ಮಾಡದೆ ಅಥವಾ ಪಾಪವನ್ನು ತಾವು ಕಂಡುಕೊಳ್ಳಲಾರದಷ್ಟು ಅವರು ತಮ್ಮ ದೃಷ್ಟಿಯಲ್ಲಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
[3] ಅವರ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿರುತ್ತವೆ; ಬುದ್ಧಿಯಿಂದ ನಡೆಯುವುದನ್ನೂ ಒಳ್ಳೆಯದನ್ನು ಮಾಡುವುದನ್ನೂ ಅವರು ಬಿಟ್ಟಿದ್ದಾರೆ.
[4] ಕುಯುಕ್ತಿಯನ್ನು ತಮ್ಮ ಹಾಸಿಗೆಯ ಮೇಲೆ ಕಲ್ಪಿಸುತ್ತಾರೆ; ಪಾಪದ ಮಾರ್ಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ; ಅವರು ಕೆಟ್ಟದ್ದಕ್ಕೆ ಅಸಹ್ಯಪಡುವುದಿಲ್ಲ.
[5] ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಆಕಾಶವನ್ನು ಮುಟ್ಟುತ್ತದೆ; ನಿಮ್ಮ ನಂಬಿಗಸ್ತಿಕೆಯು ಮೇಘಗಳವರೆಗೆ ಮುಟ್ಟಿದೆ.
[6] ನಿಮ್ಮ ನೀತಿಯು ದೊಡ್ಡ ಪರ್ವತಗಳ ಹಾಗಿದೆ; ನಿಮ್ಮ ನ್ಯಾಯತೀರ್ಪುಗಳು ಮಹಾ ಅಗಾಧವೇ. ಯೆಹೋವ ದೇವರೇ, ನೀವು ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀರಿ.
[7] ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಎಷ್ಟೋ ಅಮೂಲ್ಯವಾದದ್ದು! ಮನುಷ್ಯರು ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಆಶ್ರಯಪಡೆಯುತ್ತಾರೆ.
[8] ನಿಮ್ಮ ಆಲಯದ ಸಮೃದ್ಧಿಯಿಂದ ಅವರು ಸಂತೃಪ್ತಿ ಹೊಂದುವರು; ನಿಮ್ಮ ಹರ್ಷ ನದಿಯಿಂದ ಅವರಿಗೆ ಕುಡಿಯಲು ಕೊಡುವಿರಿ.
[9] ಏಕೆಂದರೆ ನಿಮ್ಮ ಬಳಿಯಲ್ಲಿ ಜೀವದ ಬುಗ್ಗೆ ಉಂಟು; ನಿಮ್ಮ ಬೆಳಕಿನಲ್ಲಿ ನಾವು ಬೆಳಕನ್ನು ಕಾಣುವೆವು.
[10] ನಿಮ್ಮನ್ನು ತಿಳಿದವರಿಗೆ ನಿಮ್ಮ ಪ್ರೀತಿಯು ಮುಂದುವರೆಯಲಿ ಯಥಾರ್ಥ ಹೃದಯದವರಿಗೆ ನಿಮ್ಮ ನೀತಿಯೂ ನೆಲೆಯಾಗಲಿ.
[11] ಗರ್ವಿಷ್ಠರ ಪಾದ ನನಗೆ ವಿರೋಧವಾಗಿ ಬಾರದೇ ಇರಲಿ; ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.
[12] ಕೇಡು ಮಾಡುವವರು ಬಿದ್ದಿದ್ದಾರೆ. ಅವರು ಏಳಲಾರದೆ ಕೆಳಗೆ ಬಿದ್ದಿದ್ದಾರೆ.