Skip to content
Opens in a new window
Listen to this chapter • 1:47

[1] ಜನನಾಯಕರೇ, ನೀವು ನ್ಯಾಯವಾಗಿ ತೀರ್ಪನ್ನು ನುಡಿಯುತ್ತೀರೋ? ಜನರಲ್ಲಿ ನೀವು ಯಥಾರ್ಥವಾಗಿ ನ್ಯಾಯತೀರಿಸುವಿರೋ?

[2] ಇಲ್ಲಾ, ನಿಮ್ಮ ಹೃದಯದಲ್ಲಿ ದುಷ್ಟತನವನ್ನು ಕಲ್ಪಿಸುತ್ತೀರಲ್ಲಾ, ದೇಶದಲ್ಲಿ ನಿಮ್ಮ ಕೈಗಳಿಂದ ಹಿಂಸಾಚಾರವನ್ನು ತೂಗುತ್ತೀರಲ್ಲಾ.

[3] ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ. ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.

[4] ಹಾವಿನ ವಿಷದ ಹಾಗೆ ಅವರಲ್ಲಿ ವಿಷ ಇದೆ. ಘಟಸರ್ಪದ ಹಾಗೆ ಮಂದವಾಗಿದ್ದಾರೆ.

[5] ಚಮತ್ಕಾರದಿಂದ ಆಕರ್ಷಿಸಿ, ಕೌಶಲ್ಯದಿಂದ ನುಡಿಸುವ ಹಾವಾಡಿಗನ ನಾದವನ್ನು ಕೇಳದ ಹಾವಿನಂತೆ ಇದ್ದಾರೆ.

[6] ಓ, ದೇವರೇ, ಅವರ ಹಲ್ಲುಗಳು ಮುರಿದು ಬೀಳಲಿ. ಯೆಹೋವ ದೇವರೇ, ಪ್ರಾಯದ ಸಿಂಹಗಳಂತಿರುವ ಅವರ ಕೋರೆಹಲ್ಲುಗಳು ನಾಶವಾಗಲಿ.

[7] ಅವರು ನೀರಿನಂತೆ ಕರಗಿಹೋಗಲಿ. ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.

[8] ಕರಗುವ ಗೊಂಡೆ ಹುಳದಂತೆ ಅವರು ನಾಶವಾಗಲಿ. ದಿನತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ಕಾಣದಿರಲಿ.

[9] ಗಡಿಗೆಗಳು ಮುಳ್ಳಿನ ಬೆಂಕಿಯ ಶಾಖವನ್ನು ಇನ್ನೂ ಹಸಿಯಾಗಿ ಇಲ್ಲವೆ ಒಣಗಿರುವಾಗಲೇ, ಬಿರುಗಾಳಿ ಹಾರಿಸಿಬಿಡುವಂತೆ ಅವರಿಗೆ ಆಗಲಿ.

[10] ನೀತಿವಂತರು ದುಷ್ಟರಿಗಾಗುವ ಪ್ರತಿದಂಡನೆಯನ್ನು ಕಂಡು ಹಿಗ್ಗಿ ತಮ್ಮ ಪಾದಗಳನ್ನು ದುಷ್ಟನ ರಕ್ತದ ಮೇಲಿಡಲಿ.

[11] ಆಗ ಜನರು ಹೀಗೆ ಹೇಳಿಕೊಳ್ಳುವರು, “ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ. ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”

ಕೀರ್ತನೆಗಳು — Chapters