Skip to content
Opens in a new window
Listen to this chapter • 5:19

[1] ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ನನ್ನ ದೇವರಾದ ಯೆಹೋವ ದೇವರೇ, ನೀವು ಬಹಳ ದೊಡ್ಡವರಾಗಿದ್ದೀರಿ; ಘನತೆಯಿಂದಲೂ, ಪ್ರಭಾವದಿಂದಲೂ ಭೂಷಿತನಾಗಿರುವೆ.

[2] ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ, ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.

[3] ದೇವರು ನೀರಿನ ಮೇಲೆ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾರೆ. ಮೋಡಗಳನ್ನು ತಮ್ಮ ರಥವಾಗಿ ಮಾಡುತ್ತಾರೆ. ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಾರೆ.

[4] ಅವರು ಗಾಳಿಗಳನ್ನು ತಮ್ಮ ದೂತರಾಗಿ ಮಾಡಿದ್ದಾರೆ, ಅಗ್ನಿ ಜ್ವಾಲೆಯನ್ನು ತಮ್ಮ ಸೇವಕರಾಗಿಯೂ ಮಾಡಿಕೊಂಡಿದ್ದಾರೆ.

[5] ಯುಗಯುಗಾಂತರಗಳಿಗೂ ಅದು ಕದಲದ ಹಾಗೆ, ದೇವರು ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಸ್ಥಾಪಿಸಿದ್ದಾರೆ.

[6] ಜಲಗಾಧವು ವಸ್ತ್ರದ ಹಾಗೆ ಅದನ್ನು ಮುಚ್ಚಿದೆ; ಬೆಟ್ಟಗಳ ಮೇಲೆ ಜಲರಾಶಿಗಳು ನಿಂತವು.

[7] ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು; ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.

[8] ಜಲರಾಶಿಗಳು ಬೆಟ್ಟಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀವು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.

[9] ಅವು ದಾಟದ ಹಾಗೆಯೂ, ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.

[10] ಬುಗ್ಗೆಗಳನ್ನು ಹಳ್ಳಗಳಿಗೆ ಕಳುಹಿಸುತ್ತೀರಿ. ಅವು ಬೆಟ್ಟಗಳ ನಡುವೆ ಹರಿಯುತ್ತವೆ.

[11] ಅವು ಕಾಡಿನ ಮೃಗಗಳಿಗೆಲ್ಲಾ ನೀರು ಕುಡಿಸುತ್ತವೆ; ಕಾಡುಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.

[12] ಆಕಾಶದ ಪಕ್ಷಿಗಳು, ಅವುಗಳ ಹತ್ತಿರ ವಾಸವಾಗಿದ್ದು, ಕೊಂಬೆಗಳ ಮಧ್ಯದಲ್ಲಿಂದ ಹಾಡುತ್ತವೆ.

[13] ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ. ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.

[14] ದೇವರು ಪಶುಗಳಿಗೋಸ್ಕರ ಹುಲ್ಲನ್ನೂ, ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ. ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.

[15] ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.

[16] ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.

[17] ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

[18] ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬೆಟ್ಟದ ಮೊಲಗಳಿಗೆ ಬಂಡೆಗಳು ಆಶ್ರಯವಾಗಿವೆ.

[19] ದೇವರೇ, ಕಾಲಗಳ ಸೂಚನೆಗಾಗಿ ಚಂದ್ರನನ್ನು ಸೃಷ್ಟಿಸಿದ್ದೀರಿ, ಸೂರ್ಯನು ತನ್ನ ಅಸ್ತಮಾನವನ್ನು ತಿಳಿದಿದ್ದಾನೆ.

[20] ನೀವು ಕತ್ತಲನ್ನು ಬರಮಾಡುತ್ತೀರಿ, ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗಗಳೆಲ್ಲಾ ಸಂಚರಿಸುತ್ತವೆ.

[21] ಸಿಂಹದ ಮರಿಗಳು ಬೇಟೆಗೋಸ್ಕರವೂ, ದೇವರಿಂದ ತಮ್ಮ ಆಹಾರವನ್ನು ಹುಡುಕುವುದಕ್ಕೋಸ್ಕರವೂ ಗರ್ಜಿಸುತ್ತವೆ.

[22] ಸೂರ್ಯೋದಯವಾಗಲು ಅವು ಕೂಡಿಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.

[23] ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗಿ ಸಾಯಂಕಾಲದವರೆಗೆ ದುಡಿಯುತ್ತಾನೆ.

[24] ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.

[25] ದೊಡ್ಡದೂ, ವಿಶಾಲವಾದದ್ದೂ ಆದ ಸಮುದ್ರವಿದೆ; ಅದರಲ್ಲಿ ಲೆಕ್ಕವಿಲ್ಲದಷ್ಟು ಜೀವಜಂತುಗಳೂ, ಸಣ್ಣ ದೊಡ್ಡ ಜಲಚರಗಳೂ ಇವೆ.

[26] ಅದರಲ್ಲಿ ಹಡಗುಗಳು ಹೋಗುತ್ತವೆ; ಅದರಲ್ಲಿ ಆಡುವುದಕ್ಕೆ ನೀವು ರೂಪಿಸಿದ ಲಿವ್ಯಾತಾನ ತಿಮಿಂಗಲವು ಇದೆ.

[27] ದೇವರೇ, ನೀವು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವ ಹಾಗೆ, ಅವುಗಳೆಲ್ಲಾ ನಿಮ್ಮನ್ನು ಕಾದುಕೊಂಡಿರುತ್ತವೆ.

[28] ನೀವು ಅವುಗಳಿಗೆ ಕೊಡಲು ಅವು ಕೂಡಿ ಬರುತ್ತವೆ; ನೀವು ನಿಮ್ಮ ಕೈ ತೆರೆಯಲು, ಒಳ್ಳೆಯವುಗಳಿಂದ ತೃಪ್ತಿ ಹೊಂದುತ್ತವೆ.

[29] ನೀವು ನಿಮ್ಮ ಮುಖವನ್ನು ಮರೆಮಾಡಲು, ಅವು ಹೆದರುತ್ತವೆ. ನೀವು ಅವುಗಳ ಶ್ವಾಸವನ್ನು ತೆಗೆದುಬಿಡಲು, ಸತ್ತು ಹೋಗಿ, ಮಣ್ಣುಪಾಲಾಗುತ್ತವೆ.

[30] ನೀವು ನಿಮ್ಮ ಶ್ವಾಸವನ್ನು ಕಳುಹಿಸಲು, ಜೀವಜಂತುಗಳು ಹುಟ್ಟುತ್ತವೆ; ಹೀಗೆ ನೀವು ಭೂಮಿಯನ್ನು ನೂತನಗೊಳಿಸುತ್ತೀರಿ.

[31] ಯೆಹೋವ ದೇವರ ಮಹಿಮೆಯು ಯುಗಯುಗಕ್ಕೂ ಇರಲಿ; ಯೆಹೋವ ದೇವರು ತಮ್ಮ ಕೆಲಸಗಳಲ್ಲಿ ಸಂತೋಷಪಡಲಿ.

[32] ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ; ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.

[33] ನಾನು ಜೀವಿತ ಕಾಲವೆಲ್ಲಾ ಯೆಹೋವ ದೇವರಿಗೆ ಹಾಡುತ್ತಿರುವೆನು. ನಾನು ಬದುಕಿರುವವರೆಗೆ ದೇವರನ್ನು ಸ್ತುತಿಸುತ್ತಿರುವೆನು.

[34] ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು; ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.

[35] ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ; ದುಷ್ಟರು ಇಲ್ಲದೆ ಹೋಗಲಿ. ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ಯೆಹೋವ ದೇವರಿಗೆ ಸ್ತೋತ್ರವಾಗಲಿ.

ಕೀರ್ತನೆಗಳು — Chapters