Skip to content
Opens in a new window
Listen to this chapter • 3:27

[1] ದೇವರೇ, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಟ್ಟದ್ದೇಕೆ? ನಿಮ್ಮ ಮೇವಿನ ಕುರಿಮಂದೆಯ ವಿಷಯವಾಗಿ ಬೇಸರಗೊಳ್ಳುವುದು ಏಕೆ?

[2] ಪೂರ್ವಕಾಲದಲ್ಲಿ ನೀವು ಕೊಂಡುಕೊಂಡ ನಿಮ್ಮ ಜನರನ್ನೂ ನೀವು ವಿಮೋಚಿಸಿದ ನಿಮ್ಮ ಬಾಧ್ಯತೆಯನ್ನೂ ನೀವು ವಾಸಮಾಡಿದ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೊಳ್ಳಿರಿ.

[3] ನಿತ್ಯ ನಾಶವಾದ ಈ ಪ್ರದೇಶಗಳ ಕಡೆಗೂ ಈ ಪರಿಶುದ್ಧ ನಿವಾಸವನ್ನು ವೈರಿಗಳು ಹಾಳುಮಾಡಿದ್ದರ ಕಡೆಗೂ ನಿಮ್ಮ ಹೆಜ್ಜೆಗಳನ್ನು ತಿರುಗಿಸಿರಿ.

[4] ನಿಮ್ಮ ವೈರಿಗಳು ನೀವು ನಮ್ಮನ್ನು ಸಂಧಿಸಿದ ಸ್ಥಳದಲ್ಲಿ ಗರ್ಜಿಸುತ್ತಾರೆ. ತಮ್ಮ ಗುರುತುಗಳನ್ನು ಆರಾಧನಾ ಚಿಹ್ನೆಗಳಾಗಿ ಇಟ್ಟಿದ್ದಾರೆ.

[5] ದಟ್ಟವಾದ ಮರಗಳ ಮಧ್ಯೆ ಕೊಡಲಿ ಎತ್ತುವವನ ಹಾಗೆ ಆ ಜನರು ವರ್ತಿಸಿದ್ದಾರೆ.

[6] ಈಗ ಚಿತ್ರ ಕೆಲಸಗಳನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆಯಿಂದಲೂ ಅವರು ಹೊಡೆದು ಹಾಕುತ್ತಿದ್ದಾರೆ.

[7] ನಿಮ್ಮ ಪರಿಶುದ್ಧ ಸ್ಥಳಕ್ಕೆ ಬೆಂಕಿಹಚ್ಚಿದ್ದಾರೆ. ನಿಮ್ಮ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಅಪವಿತ್ರಗೊಳಿಸಿದ್ದಾರೆ.

[8] “ಅವುಗಳನ್ನು ಒಟ್ಟಾಗಿ ಕೆಡವಿಬಿಡೋಣ,” ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಟ್ಟಿದ್ದಾರೆ.

[9] ದೇವರಿಂದ ನಮಗೆ ಅದ್ಭುತವಾದ ಸಂಕೇತಗಳು ಕೊಟ್ಟಿರುವುದಿಲ್ಲ. ಪ್ರವಾದಿಗಳು ನಮಗೆ ಉಳಿದಿರುವುದಿಲ್ಲ. ಇದು ಎಷ್ಟು ಕಾಲ ಎಂದು ನಾವ್ಯಾರೂ ತಿಳಿದಿರುವುದಿಲ್ಲ.

[10] ದೇವರೇ, ವೈರಿಯು ನಿಂದಿಸುವುದು ಎಷ್ಟರವರೆಗೆ? ಶತ್ರುವು ನಿಮ್ಮ ಹೆಸರನ್ನು ಎಂದೆಂದಿಗೂ ದೂಷಿಸುವನೋ?

[11] ಏಕೆ ನಿಮ್ಮ ಕೈಯನ್ನು, ನಿಮ್ಮ ಬಲಗೈಯನ್ನು ಸಹ ಹಿಂದೆಳೆಯುತ್ತೀರಿ? ನಿಮ್ಮ ಎದೆಯೊಳಗಿಂದ ಅದನ್ನು ಹೊರಗೆ ತೆಗೆದು ಅವರನ್ನು ದಂಡಿಸಿರಿ.

[12] ದೇವರೇ, ನೀವು ಪೂರ್ವದಿಂದಲೂ ನನ್ನ ಅರಸರಾಗಿದ್ದೀರಿ. ಭೂಲೋಕಕ್ಕೆ ರಕ್ಷಣೆಯನ್ನು ತರುವವರೂ ನೀವೇ ಆಗಿದ್ದೀರಿ.

[13] ನೀವು ನಿಮ್ಮ ಬಲದಿಂದ ಸಮುದ್ರವನ್ನು ವಿಭಾಗಿಸಿದ್ದೀರಿ. ತಿಮಿಂಗಿಲಗಳ ತಲೆಗಳನ್ನು ನೀರಿನಲ್ಲಿ ಬಡಿಸಿದ್ದೀರಿ.

[14] ನೀವು ಲಿವ್ಯಾತಾನ ಮೃಗದ ತಲೆಗಳನ್ನು ಬಡೆದಿರಲು ಅದನ್ನು ಮರುಭೂಮಿಯ ಜೀವಜಂತುಗಳಿಗೆ ಆಹಾರವಾಗಿ ಕೊಟ್ಟಿದ್ದೀರಿ.

[15] ನೀವು ಬುಗ್ಗೆಯನ್ನೂ, ಪ್ರವಾಹವನ್ನೂ ವಿಭಾಗ ಮಾಡಿದ್ದೀರಿ. ನೀವು ಯಾವಾಗಲೂ ತುಂಬಿ ಹರಿಯುವ ನದಿಗಳನ್ನು ಒಣಗಿಸಿದ್ದೀರಿ.

[16] ಹಗಲು ನಿಮ್ಮದು, ರಾತ್ರಿಯು ಸಹ ನಿಮ್ಮದು. ನೀವು ಸೂರ್ಯಚಂದ್ರನನ್ನೂ ಸ್ಥಾಪಿಸಿದ್ದೀರಿ.

[17] ನೀವು ಭೂಮಿಯ ಮೇರೆಗಳನ್ನೆಲ್ಲಾ ನಿರ್ಣಯಿಸಿದ್ದೀರಿ. ಬೇಸಿಗೆ ಮತ್ತು ಚಳಿಗಾಲವನ್ನು ನೀವು ನಿರ್ಮಿಸಿದ್ದೀರಿ.

[18] ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.

[19] ನಿಮ್ಮ ಪಾರಿವಾಳದ ಪ್ರಾಣವನ್ನು ದುಷ್ಟಮೃಗಗಳಿಗೆ ಒಪ್ಪಿಸಕೊಡಬೇಡಿರಿ. ನಿಮ್ಮ ದೀನರ ಮಂಡಳಿಯನ್ನು ಸದಾಕಾಲಕ್ಕೆ ಮರೆತುಬಿಡಬೇಡಿರಿ.

[20] ಒಡಂಬಡಿಕೆಗೆ ಗೌರವವನ್ನು ಕೊಡಿರಿ. ಏಕೆಂದರೆ ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿ ಇವೆ.

[21] ಕುಗ್ಗಿದವನು ಅವಮಾನದಿಂದ ಹಿಂದಿರುಗದಿರಲಿ. ದೀನನೂ, ಬಡವನೂ ನಿಮ್ಮ ಹೆಸರನ್ನು ಸ್ತುತಿಸಲಿ.

[22] ದೇವರೇ, ಏಳು; ನಿಮ್ಮ ನ್ಯಾಯವನ್ನು ವಾದಿಸಿರಿ. ದಿನವೆಲ್ಲಾ ಮೂರ್ಖನು ನಿಮ್ಮನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪಕಮಾಡಿಕೊಳ್ಳಿರಿ.

[23] ನಿಮ್ಮ ವೈರಿಗಳ ಗದ್ದಲವನ್ನೂ ನಿಮ್ಮ ವಿರೋಧಿಗಳ ಆಕ್ರೋಶ ನಿರಂತರವಾಗಿ ಬೆಳೆಯುವ ಕಲಹವನ್ನೂ ಮರೆತುಬಿಡಬೇಡಿರಿ.

ಕೀರ್ತನೆಗಳು — Chapters