Skip to content
Opens in a new window
Listen to this chapter • 4:47

[1] ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ.

[2] ಗುರಾಣಿಯನ್ನೂ ಖಡ್ಗವನ್ನೂ ಹಿಡಿದುಕೊಂಡು ನನ್ನ ಸಹಾಯಕ್ಕೆ ಎದ್ದು ಬನ್ನಿರಿ.

[3] ಬರ್ಜಿಯನ್ನೂ ಭಲ್ಲೆಯನ್ನೂ ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿರಿ. “ನಾನೇ ನಿಮ್ಮ ರಕ್ಷಣೆ” ಎಂದು ನನಗೆ ಹೇಳಿರಿ.

[4] ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.

[5] ಅವರು ಗಾಳಿಗೆ ಹಾರುವ ಹೊಟ್ಟಿನ ಹಾಗೆ ಆಗಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.

[6] ಅಂಥವರ ಮಾರ್ಗವು ಕತ್ತಲೆಯೂ ಜಾರುವಿಕೆಯೂ ಆಗಿರಲಿ; ಯೆಹೋವ ದೇವರ ದೂತನು ಅವರನ್ನು ಹಿಂದಟ್ಟಲಿ.

[7] ಏಕೆಂದರೆ ಕಾರಣವಿಲ್ಲದೆ ತಮ್ಮ ಬಲೆಯನ್ನು ನನಗೆ ಒಡ್ಡಿದ್ದಾರೆ; ಕಾರಣವಿಲ್ಲದೆ ನನಗೆ ಗುಂಡಿಯನ್ನು ಅಗೆದಿದ್ದಾರೆ.

[8] ನಾಶವು ಅವರಿಗೆ ಅನಿರೀಕ್ಷಿತವಾಗಿ ಬರಲಿ; ಅವರು ಅಡಗಿಸಿಟ್ಟ ಬಲೆಯು ಅವರನ್ನೇ ಹಿಡಿಯಲಿ; ವಿನಾಶನಕ್ಕಾಗಿ ಅವರು ಗುಂಡಿಯಲ್ಲಿ ಬೀಳಲಿ.

[9] ಆಗ ನನ್ನ ಪ್ರಾಣವು ಯೆಹೋವ ದೇವರಲ್ಲಿ ಉಲ್ಲಾಸಗೊಂಡು, ದೇವರ ರಕ್ಷಣೆಯಲ್ಲಿ ಸಂತೋಷಿಸುವುದು.

[10] ಯೆಹೋವ ದೇವರೇ, “ನಿಮ್ಮ ಹಾಗೆ ಯಾರು ಇದ್ದಾರೆ? ಬಡವನನ್ನು ಅವನಿಗಿಂತ ಬಲಿಷ್ಠನಿಂದ ಕಾಪಾಡುತ್ತೀರಿ ದರಿದ್ರನನ್ನೂ, ಕೊರತೆಯುಳ್ಳವನನ್ನೂ ಸುಲಿದುಕೊಳ್ಳುವವನಿಂದ ಬಿಡಿಸುತ್ತೀರಿ,” ಎಂದು ನನ್ನ ಪೂರ್ಣ ಪ್ರಾಣವೇ ಹೇಳುವುದು.

[11] ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ.

[12] ನನ್ನ ಉಪಕಾರಕ್ಕೆ ಬದಲಾಗಿ ನನಗೆ ಕೇಡನ್ನು ಮಾಡಿ ನನ್ನನ್ನು ದುಃಖದಲ್ಲಿರುವವರಂತೆ ಬಿಟ್ಟುಬಿಟ್ಟಿದ್ದರೆ

[13] ನಾನಾದರೋ ಅವರು ಅಸ್ವಸ್ಥರಾದಾಗ ಗೋಣಿತಟ್ಟು ಹೊದ್ದುಕೊಂಡು ಉಪವಾಸದಿಂದ ತಗ್ಗಿಸಿಕೊಂಡೆನು; ನನ್ನ ಪ್ರಾರ್ಥನೆಗಳಿಗೆ ಉತ್ತರ ದೊರೆಯಲಿಲ್ಲ.

[14] ಆದುದರಿಂದ ಸ್ವಸ್ಥರಾದವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಎಂದು ಭಾವಿಸಿಕೊಂಡು, ನನ್ನ ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವನಾಗಿ ತಲೆಬಾಗಿ ಅಳುತ್ತಿದ್ದೆನು.

[15] ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ.

[16] ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ.

[17] ಯೆಹೋವ ದೇವರೇ, ಎಷ್ಟರವರೆಗೆ ನೀವು ಸುಮ್ಮನೆ ನೋಡುತ್ತಾ ಇರುವಿರಿ? ಅವರ ಅಪಾಯಗಳಿಂದ ನನ್ನ ಪ್ರಾಣವನ್ನು ಬಿಡಿಸಿರಿ. ಆ ಸಿಂಹಗಳಿಂದ ನನ್ನ ಅಮೂಲ್ಯ ಪ್ರಾಣವನ್ನೂ ತಪ್ಪಿಸಿರಿ.

[18] ಆಗ ನಾನು ದೊಡ್ಡ ಸಭೆಗಳಲ್ಲಿ ನಿಮ್ಮನ್ನು ಕೊಂಡಾಡುವೆನು; ಬಹುಜನರಲ್ಲಿ ನಿಮ್ಮನ್ನು ಸ್ತುತಿಸುವೆನು.

[19] ನಿಷ್ಕಾರಣವಾಗಿರುವ ನನ್ನ ಶತ್ರುಗಳು ನನ್ನ ಮೇಲೆ ಸುಳ್ಳಾಗಿ ಸಂತೋಷಪಡದೆ ಇರಲಿ; ನನ್ನನ್ನು ಕಾರಣವಿಲ್ಲದೆ ದ್ವೇಷಿಸುವವರು ಕಣ್ಣು ಸನ್ನೆ ಮಾಡದೆ ಇರಲಿ.

[20] ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರಾಗಿ ಬಾಳುವವರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.

[21] ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.

[22] ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; ನನಗೆ ದೂರವಾಗಿರಲೂ ಬೇಡಿರಿ.

[23] ನನ್ನ ದೇವರೇ, ನನ್ನ ಯೆಹೋವ ದೇವರೇ, ನನ್ನ ನ್ಯಾಯವನ್ನು ನಿರ್ಣಯಿಸಿರಿ, ನನ್ನ ವ್ಯಾಜ್ಯದ ಪರವಾಗಿ ಎದ್ದೇಳಿರಿ.

[24] ಯೆಹೋವ ದೇವರೇ, ನನ್ನ ದೇವರೇ, ನಿಮ್ಮ ನೀತಿಯ ಪ್ರಕಾರ ನನಗೆ ನ್ಯಾಯತೀರಿಸಿರಿ; ಅವರು ನನ್ನ ವಿರುದ್ಧ ಸಂತೋಷಪಡದೆ ಇರಲಿ.

[25] ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.

[26] ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊಂದಲಿ.

[27] ನನ್ನ ನೀತಿಯಲ್ಲಿ ಸಂತೋಷಪಡುವವರು ಉತ್ಸಾಹಧ್ವನಿ ಮಾಡಿ, ಆನಂದಪಡಲಿ; “ಹೌದು, ತಮ್ಮ ಸೇವಕನ ಅಭಿವೃದ್ಧಿಯಲ್ಲಿ ಸಂತೋಷಪಡುವ ಯೆಹೋವ ದೇವರು ಮಹಿಮೆಪಡಲಿ,” ಎಂದು ಅವರು ಯಾವಾಗಲೂ ಹೇಳಲಿ.

[28] ಆಗ ನನ್ನ ನಾಲಿಗೆಯು ನಿಮ್ಮ ನೀತಿಯನ್ನೂ ದಿನವೆಲ್ಲಾ ನಿಮ್ಮ ಸ್ತೋತ್ರವನ್ನೂ ವರ್ಣಿಸುವುದು.

ಕೀರ್ತನೆಗಳು — Chapters