[1] ಯೆಹೋವ ದೇವರೇ, ನಿಮ್ಮ ದೇಶವನ್ನು ನೀವು ದಯೆ ತೋರಿಸಿದ್ದೀರಿ. ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರಮಾಡಿದ್ದೀರಿ.
[2] ನಿಮ್ಮ ಜನರ ಅಕ್ರಮವನ್ನು ಪರಿಹರಿಸಿದ್ದೀರಿ. ಅವರ ಪಾಪವನ್ನೆಲ್ಲಾ ಮುಚ್ಚಿದ್ದೀರಿ.
[3] ನಿಮ್ಮ ಕೋಪವನ್ನೆಲ್ಲಾ ತೆಗೆದುಬಿಟ್ಟಿದ್ದೀರಿ. ನಿಮ್ಮ ಬೇಸರದಿಂದ ತಿರುಗಿಕೊಂಡಿದ್ದೀರಿ.
[4] ನಮ್ಮ ರಕ್ಷಕ ಆಗಿರುವ ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ, ನಮ್ಮ ಮೇಲಿರುವ ನಿಮ್ಮ ಅಸಂತೋಷವನ್ನು ತೊಲಗಿಸಿರಿ.
[5] ಎಂದೆಂದಿಗೂ ನಮ್ಮ ಮೇಲೆ ಖಂಡಿಸುವಿರೋ? ತಲತಲಾಂತರಕ್ಕೂ ನಿಮ್ಮ ಬೇಸರ ಬೆಳೆಸುವಿರೋ?
[6] ನಿಮ್ಮ ಜನರು ನಿಮ್ಮಲ್ಲಿ ಸಂತೋಷಪಡುವಂತೆ ನೀವು ತಿರುಗಿ ನಮ್ಮನ್ನು ಉಜ್ಜೀವಿಸುವುದಿಲ್ಲವೋ?
[7] ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಮಗೆ ತೋರಿಸಿರಿ. ನಿಮ್ಮ ರಕ್ಷಣೆಯನ್ನು ನಮಗೆ ಕೊಡಿರಿ.
[8] ಯೆಹೋವ ದೇವರು ಏನು ಹೇಳುತ್ತಾರೋ ಅದನ್ನು ನಾನು ಕೇಳುವೆನು. ದೇವರು ತಮ್ಮ ಜನರಿಗೂ ತಮ್ಮ ಭಕ್ತರಿಗೂ ಸಮಾಧಾನವನ್ನು ವಾಗ್ದಾನಮಾಡುವರು. ಆದರೆ ಅವರ ಜನರು ಇನ್ನು ಬುದ್ಧಿಹೀನತೆಗೆ ತಿರುಗಿಕೊಳ್ಳದೆ ಇರಲಿ.
[9] ನಿಶ್ಚಯವಾಗಿ ಮಹಿಮೆಯು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ದೇವರಿಗೆ ಭಯಪಡುವವರಿಗೆ ದೇವರ ರಕ್ಷಣೆಯು ಸಮೀಪವಾಗಿದೆ.
[10] ಪ್ರೀತಿಯೂ ಸತ್ಯತೆಯೂ ಸಂಧಿಸಿಕೊಳ್ಳುತ್ತವೆ. ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುತ್ತವೆ.
[11] ಸತ್ಯವು ಭೂಮಿಯಿಂದ ಮೊಳೆಯುವುದು. ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
[12] ಯೆಹೋವ ದೇವರು ಒಳ್ಳೆಯದನ್ನು ಕೊಡುವರು. ನಮ್ಮ ಭೂಮಿಯು ತನ್ನ ಸುಗ್ಗಿಯನ್ನು ಕೊಡುವುದು.
[13] ನೀತಿಯು ದೇವರ ಮುಂದೆ ನಡೆದುಕೊಂಡು ಹೋಗಿ, ದೇವರಿಗೆ ಮಾರ್ಗ ಸಿದ್ಧಪಡಿಸುವುದು.