Skip to content
Opens in a new window
Listen to this chapter • 2:48

[1] ಯೆಹೋವ ದೇವರನ್ನು ಸ್ತುತಿಸಿರಿ. ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು; ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.

[2] ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ, ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.

[3] ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ, ಅವರ ಗಾಯಗಳನ್ನು ಕಟ್ಟುತ್ತಾರೆ.

[4] ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.

[5] ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು; ಅವರ ವಿವೇಕಕ್ಕೆ ಎಣೆಯಿಲ್ಲ.

[6] ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ; ದುಷ್ಟರನ್ನು ದಂಡಿಸುತ್ತಾರೆ.

[7] ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ, ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.

[8] ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ; ಭೂಮಿಗೆ ಮಳೆಯನ್ನು ಸುರಿಸುತ್ತಾರೆ; ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.

[9] ದೇವರು ಪಶುಗಳಿಗೂ, ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.

[10] ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ; ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.

[11] ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ, ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.

[12] ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು; ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.

[13] ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ, ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.

[14] ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ; ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.

[15] ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ; ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.

[16] ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

[17] ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ; ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?

[18] ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ; ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.

[19] ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ, ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.

[20] ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ; ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ. ಯೆಹೋವ ದೇವರನ್ನು ಸ್ತುತಿಸಿರಿ.

ಕೀರ್ತನೆಗಳು — Chapters